ಡಿ.1 ರಿಂದ ಸುರತ್ಕಲ್ ಟೋಲ್ ಹೆಜಮಾಡಿ ಟೋಲ್ ಜೊತೆ ವಿಲೀನ

ಕರಾವಳಿ

ಡಿಸೆಂಬರ್ 01 ರಿಂದ ಸುರತ್ಕಲ್ ಟೋಲ್ ಗೇಟ್ ಸ್ಥಗಿತ ಗೊಳಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದನ್ವಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸುರತ್ಕಲ್ ನಲ್ಲಿ ಸ್ಥಗಿತಗೊಳಿಸಿ ಹೆಜಮಾಡಿ ಟೋಲ್ ಗೇಟ್ ಜೊತೆ ವಿಲೀನ ಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಹೆಜಮಾಡಿ ಟೋಲ್ ಗೇಟ್ ದರ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್‌ಗೇಟ್ ಅನ್ನು ವಿಲೀನಗೊಳಿಸಿ ಹೆಚ್ಚುವರಿ ಶುಲ್ಕವನ್ನು ಹೆಜಮಾಡಿ ಟೋಲ್ ನಲ್ಲಿಯೇ ಸಂಗ್ರಹಿಸಲಾಗುತ್ತದೆ.

ವಿಲೀನಗೊಂಡ ನಂತರ ಹೆಜಮಾಡಿ ಟೋಲ್ ಗೇಟ್ ಪಾಸ್ ಆಗಲು ಕಾರಿಗೆ 100 ರೂ. ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ ಹೆಜಮಾಡಿಯಲ್ಲಿ ಕಾರಿಗೆ ಏಕಮುಖ ಪಾಸಿಂಗ್ 40 ರೂ. ನಿಗದಿಮಾಡಲಾಗಿತ್ತು.ಬಸ್ ಮತ್ತು ಟ್ರಕ್ ಗಳಿಗೆ ಏಕಮುಖ ಪಾಸಿಂಗ್‌ಗೆ ನಿಗದಿಪಡಿಸಲಾಗಿದ್ದ 210 ರೂ. ಶುಲ್ಕವನ್ನು 355 ರೂ.ಗಳಿಗೆ ಹೆಚ್ಚಿಸಲಾಗಿದೆ. ಭಾರೀ ಗಾತ್ರದ ಮತ್ತು ಮಲ್ಟಿ ಆಕ್ಸೆಲ್‌ನ 225 ರೂ. ಶುಲ್ಕವನ್ನು 555 ರೂ.ಗಳಿಗೆ ಹಾಗೂ 70 ರೂ. ನಿಗದಿಯಾಗಿದ್ದ ಲಘು ವಾಣಿಜ್ಯ ಮತ್ತು ಸರಕು ವಾಹನಗಳಿಗೆ 170 ರೂ. ದರ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ