ಸಾವನ್ನಪ್ಪಿದ ತನ್ನ ಪುತ್ರನ ಆಸ್ತಿಯಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 8ರ ಅಡಿ ವಿಧವೆ ತಾಯಿಗೂ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೀದರ್ ಜಿಲ್ಲೆಯ ಈರಮ್ಮ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ.ಸಚಿನ್ ಶಂಕರ್ ಮಗ್ದುಮ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಮಕ್ಕಳು ಆರನೇ ಎಪ್ಪತ್ತೈದರಷ್ಟು (6/75ನೆ) ಭಾಗದ ಆಸ್ತಿಗೆ ಅರ್ಹರಾಗಿದ್ದು, ಈರಮ್ಮ ಅವರು 6/75ನೆ ಪಾಲು ಜೊತೆಗೆ 1/25ರಷ್ಟು ಭಾಗದಷ್ಟು ಆಸ್ತಿಗೆ ಅರ್ಹರಾಗಿದ್ದಾರೆ. ಎರಡೂ ಪಾಲು ಒಟ್ಟು ಮಾಡಿದರೆ, 9/75ರಷ್ಟು ಆಸ್ತಿ ಆಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಹಿಂದೆ, ಟ್ರಯಲ್ ಕೋರ್ಟ್ ಸೇರಿದಂತೆ ಎರಡು ನ್ಯಾಯಾಲಯಗಳೂ ವಿಚಾರಣೆ ಬಳಿಕ ಹೊರಡಿಸಿರುವ ಪ್ರಾಥಮಿಕ ಡಿಕ್ರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ