ಯುವ ವಕೀಲರ ಮೇಲೆ ಪುಂಜಾಲಕಟ್ಟೆ ಠಾಣೆಯ ಪೊಲೀಸರಿಂದ ದೌರ್ಜನ್ಯ ಆರೋಪ; ಮಂಗಳೂರು ವಕೀಲರ ಸಂಘ ಖಂಡನೆ

ಕರಾವಳಿ

ಯುವ ವಕೀಲ ಕುಲದೀಪ್ ಶೆಟ್ಟಿ ಅವರ ಮೇಲೆ ಪುಂಜಾಲಕಟ್ಟೆ ಠಾಣೆಯ ಪೊಲೀಸರು ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಮಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಘಟನೆಗೆ ಖಂಡನೆ ವ್ಯಕ್ತಪಡಿಸಿದೆ.

ಈ ಕುರಿತು ತುರ್ತು ಸಭೆ ನಡೆಸಲಾಗಿದ್ದು, ಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ಧ ಪ್ರತಿಬಂದಕಾಜ್ಞೆ ಇದ್ದೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲರ ಮೇಲೆ ಎಫ್‌ಐಆರ್ ದಾಖಲಿಸಿ ರಾತೋರಾತ್ರಿ ವಕೀಲರ ಮನೆ ಪ್ರವೇಶ ಮಾಡಿ ವಕೀಲರನ್ನು ಮನೆಯಿಂದ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಲಾಗಿದೆ.

ಬಂಟ್ವಾಳದ ನ್ಯಾಯಾಲಯ ಕೂಡ ಪೋಲೀಸರ ದೌರ್ಜನ್ಯವನ್ನು ತನಿಖೆ ಮಾಡಿ ವರದಿ ಕೊಡುವಂತೆ ಹಿರಿಯ ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಹಾಗಾಗಿ ನ್ಯಾಯಾಲಯದ ಆದೇಶದಂತೆ ಈ ಕೂಡಲೇ ತಪ್ಪಿತಸ್ತ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸರಕಾರವನ್ನು ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ರೈ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.