ಪಕ್ಷದ ಕೆಲಸ ನಿರ್ಲಕ್ಷಿಸುವವರು ಅಥವಾ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲರಾದವರು ಹುದ್ದೆ ತ್ಯಜಿಸಿ:ಖರ್ಗೆ

ರಾಷ್ಟ್ರೀಯ

ಪಕ್ಷದ ಕೆಲಸ ನಿರ್ಲಕ್ಷಿಸುವವರು ಅಥವಾ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲರಾದವರು ಹುದ್ದೆ ತ್ಯಜಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಎಚ್ಚರಿಕೆ ನೀಡಿದರು.ಪಕ್ಷದ ಅಧ್ಯಕ್ಷರಾದ ನಂತರ, ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್‌ ಚಾಲನಾ ಸಮಿತಿಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ‘ಪಕ್ಷ ಸಂಘಟನೆ ಬಲಪಡಿಸುವ ಸಲುವಾಗಿ ಉನ್ನತ ಮಟ್ಟದಿಂದ ಕೆಳಹಂತದವ
ರೆಗೂ ಉತ್ತರದಾಯಿತ್ವ ಅಗತ್ಯ’ ಎಂದು ಪ್ರತಿಪಾದಿಸಿದರು.

‘ಪಕ್ಷ ಸಂಘಟನೆ ಮಾಡಿದರೂ ಬಂತು, ಮಾಡದಿದ್ದರೂ ಆಯಿತು. ವರಿಷ್ಠರು ಇದನ್ನೆಲ್ಲಾ ಗಮನಿಸುವು
ದಿಲ್ಲ ಎಂಬ ಮನೋಭಾವ ಕೆಲವರಲ್ಲಿದೆ. ಇಂಥ ಜಾಯಮಾನ ಸರಿ ಅಲ್ಲ ಹಾಗೂ ಒಪ್ಪವಂಥದ್ದೂ ಅಲ್ಲ. ಕೊಟ್ಟ ಕೆಲಸವನ್ನು ಮಾಡಲಾಗದವರು ಹೊಸಬರಿಗೆ ದಾರಿ ಮಾಡಿಕೊಡಬೇಕು’ ಎಂದು ಅವರು ತೀಕ್ಷ್ಣವಾಗಿ ಹೇಳಿದರು.
‘ಕಾಂಗ್ರೆಸ್‌ ಪಕ್ಷದ ಸಂಘಟನೆ ಪ್ರಬಲವಾಗಿ, ಉತ್ತರದಾಯಿತ್ವ ಹೊಂದಿದಾಗ ಮಾತ್ರ ಮುಂಬರುವ ಚುನಾವಣೆಗಳಲ್ಲಿ ಗೆದ್ದು, ಜನರ ಹಾಗೂ ದೇಶದ ಸೇವೆ ಮಾಡಲು ಸಾಧ್ಯವಾಗುತ್ತದೆ. ಜನಪರ ವಿಷಯಗಳನ್ನು ಮುಂದಿಟ್ಟುಕೊಂಡು 30 ರಿಂದ 90 ದಿನಗಳ ಕಾಲ ಹೋರಾಟ ನಡೆಸಬೇಕು. ಈ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಬೇಕು’ ಎಂದು ಅವರು ರಾಜ್ಯಗಳ ಉಸ್ತುವಾರಿಗಳಿಗೆ ಸೂಚಿಸಿದರು.

‘ನೀಲನಕ್ಷೆ ಸಿದ್ಧಪಡಿಸಿ’: ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ನೀಲನಕ್ಷೆಯನ್ನು ಸಿದ್ಧಪಡಿಸಬೇಕು ಎಂದು ಖರ್ಗೆ ಸೂಚಿಸಿದರು.

‘ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಸ್ತುವಾರಿಗಳು ಸಂಬಂಧಪಟ್ಟ ರಾಜ್ಯಗಳಿಗೆ ತಿಂಗಳಲ್ಲಿ ಕನಿಷ್ಠ 10 ದಿನಗಳ ಮಟ್ಟಿಗಾದರೂ ಭೇಟಿ ನೀಡಿದ್ದೀರಾ? ಪ್ರತಿ ಜಿಲ್ಲೆ ಮತ್ತು ಇತರ ಘಟಕಗಳೊಂದಿಗೆ ಸಂಪರ್ಕದ
ಲ್ಲಿದ್ದು, ಕ್ಷೇತ್ರಗಳಿಗೆ ಸಂಬಂಧಿಸಿ ವಸ್ತುಸ್ಥಿತಿ ತಿಳಿಯಲು ಪ್ರಯತ್ನಿಸಿದ್ದೀರಾ’ಎಂದು ಪ್ರಶ್ನಿಸಿದರು.‘ಮುಂದಿನ ವರ್ಷ ಹಾಗೂ 2024ರಲ್ಲಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಂಬಂಧಪಟ್ಟ ಘಟಕಗಳು ಮಾಡಿಕೊಂಡಿರುವ ಸಿದ್ಧತೆಗಳೇನು’ ಎಂದು ಅವರು ಕೇಳಿದರು.

‘ರಾಜ್ಯ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪಕ್ಷದ ಶಾಸಕರು ಮತ್ತು ಸಂಸದರು ಈ ಎಲ್ಲ ಸಂಗತಿಗಳಿಗೆ ಸಂಬಂಧಿಸಿ ನೀಲನಕ್ಷೆಯೊಂದನ್ನು ಸಿದ್ಧಪಡಿಸದಿದ್ದರೆ, ಅವುಗಳನ್ನು ತಳಮಟ್ಟದಲ್ಲಿ ಅನುಷ್ಠಾನಕ್ಕೆ ತರದಿದ್ದಲ್ಲಿ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ’ ಎಂದೂ ಎಚ್ಚರಿಸಿದರು.

‘ದೇಶದಲ್ಲಿ ದಲಿತರು, ಬುಡಕಟ್ಟು ಜನರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ತುಳಿತಕ್ಕೆ ಒಳಗಾದವರಲ್ಲಿ ಅಭದ್ರತೆ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಅವುಗಳ ರಕ್ಷಣೆಗಾಗಿ ಹೋರಾಟ ನಡೆಸುವುದು ಕಾಂಗ್ರೆಸ್‌ನ ಜವಾಬ್ದಾರಿ’ ಎಂದರು.