ವಕೀಲರ ಮೇಲೆ ಹಲ್ಲೆ,ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಬೃಹತ್ ಪ್ರತಿಭಟನೆ

ಕರಾವಳಿ

ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿಯವರಿಗೆ ಎಸ್‌ಐ ಅವರಿಂದ ಅಮಾನವೀಯ ದೌರ್ಜನ್ಯ, ಅಕ್ರಮ ಬಂಧನ ಹಾಗೂ ಬೆಂಗಳೂರಿನ ವಕೀಲ ಲಕ್ಷ್ಮೀಶ ಅವರ ಮೇಲೆ ಗೂಂಡಾ ದಾಳಿಯನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು ಮುಂಬರುವ ಬೆಳಗಾವಿ ವಿಧಾನ ಮಂಡಳ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ದೃಢ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, “ಬೆಳಗಾವಿ ಅಧಿವೇಶನದಲ್ಲೇ ಪ್ರಸ್ತಾವಿತ ಮಸೂದೆ ಮಂಡಿಸಿ ವಕೀಲರ ಸುರಕ್ಷತಾ ಕಾಯಿದೆ ಜಾರಿ ಮಾಡಲು ರಾಜ್ಯ ಸರ್ಕಾರ ದೃಢ ನಿರ್ಧಾರ ಮಾಡಬೇಕು. ಈ ಸಂಬಂಧ ಡಿಸೆಂಬರ್‌ 10 ರಂದು ರಾಜ್ಯ ವಕೀಲರ ಸಂಘದ ಎಲ್ಲಾ ಜಿಲ್ಲಾ ಘಟಕಗಳ ಪ್ರಮುಖರ ಸಭೆ ನಡೆಸಲಾಗುವುದು. ರಾಜ್ಯ ವಕೀಲರ ಪರಿಷತ್ ನೇತೃತ್ವದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿ ಸೂಕ್ತ ನಿರ್ಣಯ ಅಂಗೀಕರಿಸಲಾಗುವುದು” ಎಂದು ಹೇಳಿದ್ದಾರೆ.