ಬೈಂದೂರು ಹುಡುಗರ ಬೇಕರಿಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ, ರೌಡಿಗಳಿಗೆ ಸುಪಾರಿ ಕೊಟ್ಟ ವ್ಯಕ್ತಿ ಯಾರು.?

ರಾಜ್ಯ

ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಉಡುಪಿಯ ಬೈಂದೂರಿನ ಯುವಕರ ಬೇಕರಿ ನುಗ್ಗಿ ಪುಡಿರೌಡಿಗಳು ದಾಂಧಲೆ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಹಲ್ಲೆಗೊಳಗಾದ ಯುವಕರ ಅಂಗಡಿಯ ಪಕ್ಕದಲ್ಲೇ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ್ ಎಂಬಾತ ಸುಪಾರಿ ಕೊಟ್ಟು ಕೃತ್ಯ ನಡೆಸಿರುವುದು ಬಹಿರಂಗವಾಗಿದೆ.ಮಂಜುನಾಥ್ ಸ್ಥಳೀಯ ಹುಡುಗರನ್ನು ಬಳಸಿಕೊಂಡು ಗಲಾಟೆ ಮಾಡಿಸಿದ್ದಾನೆ.ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿರುವ ಯುವಕರ ಅಂಗಡಿ ಪಕ್ಕದಲ್ಲಿ ಮಂಜುನಾಥ್ ನ ಟೀ-ಕಾಫಿ ಅಂಗಡಿ ಇತ್ತು.ತನ್ನ ಅಂಗಡಿಯ ವ್ಯಾಪಾರಕ್ಕೆ ಈ ಅಂಗಡಿಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿ ಸುಪಾರಿ ಕೊಟ್ಟು ಸ್ಥಳೀಯ ಹುಡುಗರ ಬಳಿ ಕೃತ್ಯ ನಡೆಸಲು ಹೇಳಿದ್ದಾನೆ.

ಯುವಕರ ಮೇಲೆ ಪುಡಿರೌಡಿಗಳ ಹಲ್ಲೆಯ ವಿಡಿಯೋ ವೈರಲ್ ಆಗಿತ್ತು. ವಿಡಿಯೊ ವೈರಲ್ ಬೆನ್ನಲ್ಲೇ ಹಲ್ಲೆ ಪ್ರಕರಣದ ಕುರಿತು ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ಹಂಚಿಕೊಂಡು ಬೆಂಗಳೂರಿಗೆ ದುಡಿಮೆಗಾಗಿ ಬಂದವರ ಮೇಲೆ ಹಲ್ಲೆ ಮಾಡಿರುವ ಪುಡಿ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಬೈಂದೂರಿನ ಯುವಕರು ಬೆಂಗಳೂರಿಗೆ ಬಂದು ಚಿಕ್ಕದಾಗಿ ಅಂಗಡಿ ತೆಗೆದು ಕೆಲಸ ಮಾಡಿಕೊಂಡಿದ್ದರು. ಆದರೆ, ಮೊನ್ನೆ ರಾತ್ರಿ 11 ಗಂಟೆ ವೇಳೆಗೆ ಅಂಗಡಿಗೆ ಬಂದ ಕೆಲ ಯುವಕರು ಅಂಗಡಿಯನ್ನೇ ಒಡೆದು ಹಾಕಿದ್ದಾರೆ. ಅಂಗಡಿ ಮಾಲೀಕ ಎಲ್ಲಿ ಅಂತ ಕೇಳಿ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ‌ ದಾಂಧಲೆ ನಡೆಸಿದ್ದಾರೆ.