ಕರಾವಳಿ ಭಾಗದಲ್ಲಿ ಮೆಲ್ಲನೆ ಮೂಲೆಗೆ ಸೇರಿದ್ದ ಅನೈತಿಕ ಪೊಲೀಸ್ ಗಿರಿ ಮತ್ತೆ ವಿಜೃಂಭಿಸಲು ಆರಂಭಿಸಿದೆ. ಇನ್ನೇನೂ ಚುನಾವಣೆಗೆ 4-5 ತಿಂಗಳು ಬಾಕಿ ಇರುವಂತೆ ಹಿಂದೂ-ಮುಸ್ಲಿಂ ಮಧ್ಯೆ ಹುಳಿ ಹಿಂಡುವ ಅನೈತಿಕ ಗೂಂಡಾಗಿರಿ ಸದ್ದು ಮಾಡತೊಡಗಿದೆ.
ಕೆಲವೇ ತಿಂಗಳ ಹಿಂದೆ ಅಡ್ಡೂರಿನ ಇಬ್ಬರು ಜವಳಿ ವ್ಯಾಪಾರಿಗಳ ಮೇಲೆ ಪುತ್ತೂರಿನ ಕಡಬದಲ್ಲಿ ಭೀಕರ ಹಲ್ಲೆ ನಡೆಸುವ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಉತ್ತರ ಪ್ರದೇಶ ಮಾದರಿಯ ಗುಂಪು ಹಲ್ಲೆ ಕರಾವಳಿಯಲ್ಲಿ ಪ್ರತಿಧ್ವನಿಸಿತ್ತು. ಮುಸ್ಲಿಂ ಸಂಘಟನೆಗಳು ಈ ಭೀಕರ ಗುಂಪು ಹಲ್ಲೆ ಬಗ್ಗೆ ಪ್ರತಿಭಟನೆ ಕೂಡ ನಡೆಸಿತ್ತು.
ಇತ್ತೀಚೆಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ ಮುಸ್ಲಿಂ ಉದ್ಯೋಗಿಯೋರ್ವನಿಗೆ ಮಳಿಗೆಗೆ ಗ್ರಾಹಕರಾಗಿ ಬಂದಿದ್ದ 20 ಮಂದಿಯ ಭಜರಂಗದಳದ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಚಿನ್ನಾಭರಣ ಮಳಿಗೆಯ ಉದ್ಯೋಗಿ, ಉಳ್ಳಾಲ ನಿವಾಸಿಯಾದ ಮುಸ್ಲಿಂ ಯುವಕ ಅದೇ ಮಳಿಗೆಯಲ್ಲಿ ‘ರಿಸೆಪ್ಷನಿಸ್ಟ್’ ಆಗಿರುವ ಚಿಕ್ಕಮಗಳೂರು ಜಿಲ್ಲೆಯ ಹಿಂದೂ ಯುವತಿಯೋರ್ವಳನ್ನು ಲವ್ ಜಿಹಾದ್ ನಡೆಸಲು ಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿತ್ತು.ಕದ್ರಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹಲ್ಲೆಗೊಳಗಾದ ಮುಸ್ಲಿಂ ಯುವಕ, ಯುವತಿಯ ಪೋಷಕರು ಹಾಗೂ ಚಿನ್ನಾಭರಣ ಮಳಿಗೆಯವರು ನೀಡಿದ ದೂರು ಸೇರಿ ಮೂರು ದೂರು ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಾಂತಾರ ಚಿತ್ರ ನೋಡಲು ಹೋದ ಮುಸ್ಲಿಂ ಜೋಡಿಗೆ ಐವರು ಮತಾಂದ ಯುವಕರು ಹಿಂದು ದೇವರ ಚಿತ್ರ ನೋಡಬೇಡಿ ಎಂದು ಥಳಿಸಿದ್ದಾರೆ.
ಕೊಟ್ಟಾರ ಎಂಬಲ್ಲಿ ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಊಟಕ್ಕೆಂದು ಹೋಟೇಲ್ ಹುಡುಕಿಕೊಂಡು ಹೊರಟಿದ್ದ ಯುವಕ ಯುವತಿಯರನ್ನು ತಡೆದು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಹೊಟೇಲ್ ಗೆ ಊಟಕ್ಕೆ ಬಂದಿರುವುದಾಗಿ ಯುವಕ, ಯುವತಿಯರು ಹೇಳಿದರೂ ಮಧ್ಯರಾತ್ರಿ ಯಾವ ಹೊಟೇಲ್ ಇದೆ ಎಂದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.ದ.ಕ ಜಿಲ್ಲೆಯ ಹಲವಾರು ಕಡೆಗಳಲ್ಲಿ ಮತಾಂಧರಿಂದ ಇಂತಹ ಅಹಿತಕರ ಘಟನೆ ನಡೆಯುತ್ತಿದೆ.
ಚುನಾವಣೆ ವರ್ಷವಾಗಿರುವುದರಿಂದ ಕರಾವಳಿ ಭಾಗದಲ್ಲಿ ಇನ್ನಷ್ಟು ಗುಂಪು ಹಲ್ಲೆ, ಅನೈತಿಕ ಪೊಲೀಸ್ ಗಿರಿ ನಡೆಯುವ ಸಾಧ್ಯತೆ ಇರುವುದು ದಟ್ಟವಾಗಿದೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅನೈತಿಕ ಪೊಲೀಸ್ ಗಿರಿ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು.ಯಾರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು.ಶಾಂತಿ ಸಹಕಾರ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.ಆದರೆ ಇದೊಂದು ಹೇಳಿಕೆ ಮಾತ್ರ ಆಗದೆ ಕಾರ್ಯ ರೂಪಕ್ಕೂ ಬರಲಿ.