ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟ ತುಳುನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಮಹತ್ವದ ವಿದ್ಯಮಾನ. ಕೇಂದ್ರ ಸರಕಾರದ ಟೋಲ್ ಗೇಟ್ ತೆರವಿಗಾಗಿ ಸತತ ಆರು ವರ್ಷಗಳ ಕಾಲ ಜನತೆ ನಡೆಸಿದ ಹೋರಾಟದ ಹಾದಿ ರೋಚಕವಾದದ್ದು. ಅದರಲ್ಲಿಯೂ ಧರ್ಮಗಳ ಆಧಾರದಲ್ಲಿ ವಿಭಜನೆಗೊಂಡ, ಪರಸ್ಪರರನ್ನು ಅಪನಂಬಿಕೆಯಲ್ಲಿ ಕಾಣುವ, ಜನಪರವಾದ ಹೋರಾಟಗಳೇ ನಡೆಯುವುದಿಲ್ಲ ಎಂಬ ಆರೋಪ ಹೊತ್ತ ಈ ನೆಲದಲ್ಲಿ ಎಲ್ಲಾ ಭಾಷೆ, ಧರ್ಮ, ವಿಭಾಗಗಳಿಗೆ ಸೇರಿದ ಜನಸಾಮಾನ್ಯರು ಪಕ್ಷಾತೀತವಾಗಿ ಒಂದು ವೇದಿಕೆಯಡಿ ಸೇರಿ ಹೋರಾಡಿ,ಗೆದ್ದದ್ದು ಸಾಮಾನ್ಯ ಸಂಗತಿ ಅಲ್ಲ.
ಇಂತಹ ಅರ್ಹ ಗೆಲುವನ್ನು ಸಂಭ್ರಮಿಸುವುದು, ಎಲ್ಲರನ್ನೂ ಒಗ್ಗೂಡಿಸಿ ಈ ಹೋರಾಟದ ನೇತೃತ್ವ ವಹಿಸಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯನ್ನು ಅಭಿನಂದಿಸುವುದು, 35 ದಿನಗಳ ಕಾಲ ನಡೆದ ಹಗಲು ರಾತ್ರಿ ಧರಣಿಯಲ್ಲಿ ಎಲೆಮರೆ ಕಾಯಿಯಂತೆ ದುಡಿದವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ. ಅದರಲ್ಲೂ ಗುರುಪುರ ಕೈಕಂಬ ಸುತ್ತಮುತ್ತಲ ಗ್ರಾಮಗಳ ಹಲವು ಸಂಘ ಸಂಸ್ಥೆಗಳು ಟೋಲ್ ಗೇಟ್ ತೆರವು ಮಾದರಿ ಹೋರಾಟದ ನಿರ್ಣಾಯಕ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿದ್ದವು ಎಂಬುದು ಹೆಮ್ಮೆಯ ಸಂಗತಿ.
ಅ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ವೇದಿಕೆ. ಗುರುಪುರ, ಕೈಕಂಬ ಇದರ ವತಿಯಿಂದ ಕೈಕಂಬ ಪ್ರೀಮಿಯರ್ ಹಾಲಿನಲ್ಲಿ ಹೋರಾಟಗಾರರನ್ನು ಅಭಿನಂದಿಸಲಾಯಿತು.ಆರು ವರ್ಷಗಳಿಂದ ಈ ಹೋರಾಟಕ್ಕೆ ನೇತ್ರತ್ವ ನೀಡಿ,ಅವಿರತ ಶ್ರಮಪಟ್ಟು ವಿಜಯದ ಪತಾಕೆ ಹಾರಿಸಿದ ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳರವರನ್ನು ಚಾಲೆಂಜರ್ಸ್ ಪ್ರೆಂಡ್ಸ್ ಸರ್ಕಲ್ ಸೂರಲ್ಪಾಡಿ ಇದರ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.