ಗುರುಪುರ,ಕೈಕಂಬ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ,ಹುಚ್ಚು ನಾಯಿ ಕಡಿತದಿಂದ ಸತ್ತ ಎತ್ತುಗಳು.ಕಂಗೆಟ್ಟ ನಾಗರಿಕರು

ಕರಾವಳಿ

ಗುರುಪುರ ಹೋಬಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಜನರು ಜೀವ ಭಯದಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ಇತ್ತ ತಲೆ ಹಾಕುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಾದ್ಯಂತ ನಾಯಿಗಳು ಎಲ್ಲೆಡೆ ವಾಹನ ಸವಾರರ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಇನ್ನು ನಾಯಿಗಳ ಹಾವಳಿ ಹೆಚ್ಚಾದ ಕಾರಣ ಮಕ್ಕಳು, ಮಹಿಳೆಯರು ಸೇರಿದಂತೆ ಜನರು ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ನಾಯಿಗಳ ಹಾವಳಿ ತಡೆಗಟ್ಟುವಂತಹ ಯಾವುದೇ ಸೂಕ್ತ ಕ್ರಮ ಪಂಚಾಯತ್ ವ್ಯಾಪ್ಕಿಯಲ್ಲಿ ಕೈಗೊಂಡಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ವಾಹನ ಸವಾರರನ್ನು ಕೂಡ ಹಿಂಬಾಲಿಸಿ ದಾಳಿ ನಡೆಸುತ್ತಿವೆ ಬೀದಿ ನಾಯಿಗಳು.ಇದರಿಂದ ಅಪಘಾತಗಳು ನಡೆಯುವ ಸಂಭವವಿದೆ. ನಾಯಿಗಳನ್ನು ಕಂಡರೆ ಸಾಕು ಜನರು ಬೆಚ್ಚಿಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸಾಕಿದ ಜಾನುವಾರುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಗೀಳಿಗೆ ಜನರು ಕಂಗಾಲಾಗಿದ್ದಾರೆ. ನಾಯಿಗಳ ದಾಳಿಯಿಂದ ಜನರು ನಿತ್ಯವೂ ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ.

ಇತ್ತೀಚೆಗೆ ನಾಯಿಗಳ ಗುಂಪೊಂದು ಬಡಗುಳಿಪಾಡಿ ಪ್ರದೇಶದ ಬಿಡಾಡಿ ದನಗಳ ಮೇಲೆ ದಾಳಿ ನಡೆಸಿ ಎರಡು ಎತ್ತುಗಳಿಗೆ ಕಚ್ಚಿದ ಪರಿಣಾಮ ಅ ಎರಡು ಎತ್ತುಗಳಿಗೆ ಹುಚ್ಚು ಹಿಡಿದು, ಎತ್ತುಗಳು ಜನರ ಮೇಲೆ ದಾಳಿಯೂ ನಡೆಸಿತ್ತು.ಕೊನೆಗೆ ವಾರದ ಬಳಿಕ ಎತ್ತುಗಳು ಸತ್ತು ಹೋದವು,ಅದನ್ನು ಗ್ರಾಮ ಪಂಚಾಯತಿನ ಮುಖಾಂತರ ದಫನ ಕಾರ್ಯವೂ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟದಿಂದ ಶಾಲಾ ಮಕ್ಕಳು, ಮಹಿಳೆಯರು,ನಾಗರಿಕರು ಜೀವ ಭಯದಲ್ಲಿಯೇ ಓಡಾಡುವಂತಾಗಿದೆ‌. ನಾಯಿಗಳ ಬಗ್ಗೆ ಯಾವ ಅಧಿಕಾರಿಗಳು ಕೂಡ ಗಂಭೀರವಾಗಿ ಪರಿಗಣಿಸಿಲ್ಲ.ರೇಬಿಸ್ ಲಸಿಕೆ ಹಾಕಿ ವಾಪಸ್ ಬಿಟ್ಟ ಬಳಿಕ ಶ್ವಾನಗಳು ರೊಚ್ಚಿಗೇಳುತ್ತಿವೆ. ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಜನರು ಪ್ರತಿಕ್ಷಣವೂ ಹಿಡಿಶಾಪ ಹಾಕುತ್ತಿದ್ದು, ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಗ್ರಾಮಗಳ ವ್ಯಾಪ್ತಿಯಲ್ಲಿನ ನಾಯಿಗಳಿಗೆ ಈ ಕೂಡಲೇ ಕ್ರಮ ಜರುಗಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಪಶು ವೈದ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು,ಆಢಳಿತ ವರ್ಗ ಬೀದಿ ನಾಯಿಗಳ ಹಾವಳಿ ತಡೆಗೆ ಯಾಕೆ ಕ್ರಮ ಕೈಗೊಂಡಿಲ್ಲ? ಬಂದಿರುವ ಅನುದಾನ ಏನಾಗಿದೆ? ನಾಯಿಗಳನ್ನು ಹಾಗೇ ಬಿಟ್ಟರೆ ಶಾಶ್ವತ ಪರಿಹಾರವಾಗುತ್ತದೆಯೇ.? ಶೀಘ್ರವೇ ಸಂಬಂದ ಪಟ್ಟವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕೈಗೊಂಡು ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರನ್ನು ರಕ್ಷಿಸಬೇಕಾಗಿದೆ.