ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಮುಗಿಸಿಯೇ ಬಿಟ್ರು ಸಂತ್ರಸ್ತೆಯ ಕುಟುಂಬಸ್ಥರು.!

ರಾಜ್ಯ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ ಕುಪ್ಪಣ್ಣ ಎಂಬಾತನನ್ನು ಸಂತ್ರಸ್ತೆಯ ಕುಟುಂಬಸ್ಥರು ಹೊಡೆದು ಕೊಲೆ ಮಾಡಿರುವ ಘಟನೆ ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ನಡೆದಿದೆ.ಕುಪ್ಪಣ್ಣ ಎಂಬಾತ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ.

ಈ ವಿಚಾರವನ್ನು ಬಾಲಕಿ ತನ್ನ ಮನೆಯವರಿಗೆ ತಿಳಿಸಿದ್ದಳು. ತಕ್ಷಣವೇ ಬಾಲಕಿಯ ಕುಟುಂಬಸ್ಥರು ಆರೋಪಿಯನ್ನು ಹುಡುಕಲು ಆರಂಭಿಸಿದ್ದರು. ಈ ವೇಳೆ ಬಾಬುಸಾಪಾಳ್ಯದ ಮನೆಯಲ್ಲಿ ಕುಪ್ಪಣ್ಣ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಅಲ್ಲಿಗೆ ತೆರಳಿ, ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಬಾಲಕಿಯ ಕುಟುಂಬಸ್ಥರಾದ ನಾಲ್ಕು ಮಂದಿ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧು ಹಾಗೂ ಇನ್ನುಳಿದ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಕುಪ್ಪಣ್ಣ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ಹಾಗೂ ಸಂತ್ರಸ್ಥ ಬಾಲಕಿ ಮನೆಯವರ ಮೇಲೆ ಕೊಲೆ ಕೇಸ್ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಯಾಗಿ ಹೋಗಿರುವ ಕುಪ್ಪಣ್ಣ ಮೂಲತಃ ತಮಿಳುನಾಡಿನವನು.ಕಳೆದ ನಾಲ್ಕು ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ಬಾಬುಸಪಾಳ್ಯದಲ್ಲಿ ವಾಸವಾಗಿದ್ದ. ಅಪ್ರಾಪ್ತ ಬಾಲಕಿ ಈತ ವಾಸವಿದ್ದ ಪಕ್ಕದ ಮನೆಯಲ್ಲಿ ವಾಸವಾಗಿದ್ದಳು. ಬಾಲಕಿ ಮಧ್ಯಾಹ್ನ ವೇಳೆ ಮನೆಯ ಮೇಲೆ ಒಣಗಲು ಹಾಕಿದ್ದ ಬಟ್ಟೆ ತರಲು ಹೋಗಿದ್ದಾಳೆ. ಈ ವೇಳೆ ಬಾಲಕಿಯನ್ನು ಮನೆಯೊಳಗೆ ಕರೆದು, ಜೂಸ್ ಕೊಟ್ಟು ಕುಡಿಯಲು ಹೇಳಿದ್ದಾನೆ.ಜ್ಯೂಸ್ ಕುಡಿದ ಬಾಲಕಿ ಅಸ್ವಸ್ಥಳಾಗುತ್ತಿದ್ದಂತೆ, ಕುಪ್ಪಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಟ್ಟೆ ತರಲು ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದಿದ್ದಾಗ ಮನೆಯವರು ಹುಡುಕಾಡಿದ್ದಾರೆ. ಈ ವೇಳೆ ಕುಪ್ಪಣ್ಣನ ಮನೆಯಲ್ಲಿ ಬಾಲಕಿ ಅಸ್ವಸ್ಥಳಾಗಿ ಬಿದ್ದಿರುವುದು ಗೊತ್ತಾಗುತ್ತದೆ. ತಕ್ಷಣವೇ ಬಾಲಕಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಬಳಿಕ ಘಟನೆಯ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ಇದಾಗುತ್ತಿದ್ದಂತೆ ತಕ್ಷಣವೇ ಕುಪ್ಪಣ್ಣನ ಮನೆಗೆ ಹೋಗಿ ಕುಟುಂಬಸ್ಥರು ಥಳಿಸಿದ್ದಾರೆ. ನಂತರ ಬಾಕಿಯ ಮನೆಯವರು ಮುಂಜಾನೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಮನೆ ಬಳಿ ಹೋಗಿ ನೋಡಿದಾಗ ಕುಪ್ಪಣ್ಣ ಮೃತಪಟ್ಟಿರುವುದು ಗೊತ್ತಾಗಿದೆ.