2023 ರ ವಿಧಾನಸಭಾ ಚುನಾವಣೆ ಮೇಲ್ವಿಚಾರಣೆ ಸಮಿತಿ ರಚಿಸಿದ ಕಾಂಗ್ರೆಸ್. ಜನವರಿ 15 ರೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ರಾಜ್ಯ

2023 ರ ವಿಧಾನಸಭಾ ಚುನಾವಣಾ ಕುರಿತು ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯ ಕಾಂಗ್ರೇಸ್ ನಾಯಕರ ಜೊತೆಗೆ ಚರ್ಚೆ ನಡೆಸಿ,ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆಯ ಮಾದರಿ, ಹಾಗೂ ಚುನಾವಣಾ ಕಾರ್ಯತಂತ್ರಗಳ ಕುರಿತು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಚುನಾವಣಾ ಸಿದ್ಧತೆಗಾಗಿ ಮುಂದಿನ 75 ದಿನಗಳಲ್ಲಿ ಪಕ್ಷ ಏನೇನು ಮಾಡಬೇಕು ಎಂಬುದರ ಕುರಿತು ದೆಹಲಿಯಲ್ಲಿ ಹೈಕಮಾಂಡ್‌ ಜೊತೆ ಚರ್ಚಿಸಿದ್ದೇವೆ. ಅದರಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಜನವರಿ 15ರೊಳಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಲಿದೆ ಎಂದರು.

2023ರ ಮೇ ತಿಂಗಳ ಆಸುಪಾಸಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚಿಸಿದೆ.ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ ಅವರು ಈ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ಒಟ್ಟು 36 ಮಂದಿ ಸದಸ್ಯರಿದ್ದಾರೆ. ಅವರೆಲ್ಲರು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ 2023ರ ಮೇಲ್ವಿಚಾರಣೆ ಮಾಡಲಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ)ಅಡಿ ಚುನಾವಣೆ ಟಿಕೆಟ್‌ಗಾಗಿ ಬೇಡಿಕೆ,ಮನವಿಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡಲಿದ್ದಾರೆ ಎಂದು ವರಿಷ್ಠರು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮುಖಂಡರಾದ ಎಂ.ಬಿ ಪಾಟೀಲ್, ದಿನೇಶ್ ಗುಂಡೂರಾವ್, ಎಚ್‌.ಕೆ. ಪಾಟೀಲ್, ಕೆಎಚ್‌ ಮುನೇನಕೋಪ್ಪ, ವೀರಪ್ಪ ಮೊಯ್ಲಿ, ಜಿ.ಪರಮೇಶ್ವರ್, ಆರ್‌.ವಿ.ದೇಶಪಾಂಡೆ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಆರ್.ಧ್ರುವ ನಾರಾಯಣ್, ಸಲೀಂ ಅಹ್ಮದ್, ಕೆ.ರೆಹಮಾನ್ ಖಾನ್, ಮಾರ್ಗರೇಟ್ ಆಳ್ವಾ, ಕೆ.ಜೆ.ಜಾರ್ಜ್‌, ಯು.ಟಿ.ಖಾದರ್, ಕೆ.ಗೋವಿಂದರಾಜ್ ಮತ್ತು ಎಚ್‌.ಸಿ.ಮಹಾದೇವಪ್ಪ, ಎನ್. ಚೆಲುವರಾಯ ಸ್ವಾಮಿ, ಬಸವರಾಜ ರಾಯರೆಡ್ಡಿ, ಡಿ.ಕೆ.ಸುರೇಶ್, ಎಲ್‌ ಹನುಮಂತಯ್ಯ, ಸೈಯದ್ ನಾಸಿರ್ ಹುಸೇನ್, ಎಂ.ಆರ್.ಸೀತಾರಾಮ್, ಶಿವರಾಜ ತಂಗಡಗಿ, ವಿನಯ್ ಕುಲಕರ್ಣಿ, ವಿ.ಎಸ್. ಉಗ್ರಪ್ಪ, ಬೋಸ್‌ರಾಜು, ವಿನಯ‌ಕುಮಾರ್ ಸೊರಕೆ, ಶರಣಪ್ಪ ಸುಣಗಾರ್, ಜಿ.ಪದ್ಮಾವತಿ ಹಾಗೂ ಶ್ಯಾಮನೂರು ಶಿವಶಂಕರಪ್ಪ ಅವರು ಈ ಸಮಿಯ ಸದಸ್ಯರಾಗಿದ್ದಾರೆ ಎಂದು ಭಾರತೀಯ ಕಾಂಗ್ರೆಸ್‌ ಪಕ್ಷ ತಿಳಿಸಿದೆ.