ಕಬೀರ್ ಉಲ್ಲಾಳ್ ರಂತಹ ಮಾನವ ಹಕ್ಕು ಕಾರ್ಯಕರ್ತರ ಬೆನ್ನಿಗೆ ನಾವು ನಿಲ್ಲದಿದ್ದರೆ ಹೇಗೆ ಅಲ್ವೇ? : ನವೀನ್ ಸೂರಿಂಜೆ

ಕರಾವಳಿ

2008 ಇರಬೇಕು. ಉಲ್ಲಾಳದಲ್ಲಿ ನಡೆದ ಕೋಮುಗಲಭೆಯ ವೇಳೆ ಪೊಲೀಸರು ಮತ್ತು ಕೋಮುವಾದಿಗಳು ಜಂಟಿಯಾಗಿ ಮುಸ್ಲೀಮರ ಮನೆಗಳಿಗೆ ನುಗ್ಗಿ ದೌರ್ಜನ್ಯ ನಡೆಸಿದ್ದರು. ನಾನು ಮತ್ತು ಸುದೀಪ್ತೊ ಮೊಂಡಲ್ ಮಾನವ ಹಕ್ಕು ಕಾರ್ಯಕರ್ತ ಕಬೀರ್ ಉಲ್ಲಾಳ್ ಸಹಕಾರದಲ್ಲಿ ದೌರ್ಜನ್ಯಕ್ಕೀಡಾದ ಮನೆಮನೆಗಳಿಗೆ ತೆರಳಿ ವರದಿ ಮಾಡಿದ್ದೆವು. ಕಬೀರ್ ಉಲ್ಲಾಳ್ ರವರು ನಮ್ಮ ಸರಣಿ ಪತ್ರಿಕಾ ವರದಿಗಳನ್ನೇ ದಾಖಲೆಯಾಗಿಟ್ಟುಕೊಂಡು ಮಾನವ ಹಕ್ಕು ಆಯೋಗ ಮತ್ತು ಸರ್ಕಾರಗಳ ಗಮನ ಸೆಳೆದು ಹಲವು ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಕಾರಣವಾಗಿದ್ದರು. ಇದಾದ ಬಳಿಕ ಉಲ್ಲಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ತು ವರ್ಷದ ಮಗುವೊಂದರ ಮೇಲೆ ಮುಸ್ಲಿಂ ಎಂಬ ಕಾರಣಕ್ಕೆ ಸಬ್ ಇನ್ಸ್ ಸ್ಪೆಕ್ಟರ್ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣವನ್ನೂ ಕಬೀರ್ ಉಲ್ಲಾಳ್ ಹಲವು ಆಯೋಗ, ಪ್ರಾಧಿಕಾರಗಳ ಗಮನ ಸೆಳೆದಿದ್ದರಿಂದ ಸಬ್ ಇನ್ಸ್ ಸ್ಪೆಕ್ಟರ್ ವಿರುದ್ದ ತನಿಖೆ ನಡೆಯುತ್ತಿತ್ತು.
ಇದೇ ದ್ವೇಷದಲ್ಲಿ ಕಬೀರ್ ಉಲ್ಲಾಳ್ ರನ್ನು ಠಾಣೆಗೆ ಕರೆಸಿದ ಅದೇ ಸಬ್ ಇನ್ಸ್ ಸ್ಪೆಕ್ಟರ್ ಕಬೀರ್ ಉಲ್ಲಾಳರ ಬಟ್ಟೆ ಕಳಚಿ ಠಾಣೆಯಲ್ಲಿ ಚಡ್ಡಿಯಲ್ಲಿ ಕೂರಿಸಿ ಹಲ್ಲೆ ಮಾಡಿದ್ದರು. ನನಗೆ ವಿಷಯ ತಿಳಿದ ತಕ್ಷಣ ಠಾಣೆಗೆ ತೆರಳಿ ಈ ಬಗ್ಗೆ ವಿಸ್ತೃತ ವರದಿ ಮಾಡಿದ್ದಲ್ಲದೆ, ಒಂದು ವಾರಗಳ ಕಾಲ ಫಾಲೋಅಪ್ ವರದಿ ಮಾಡಿ ಸರ್ಕಾರದ ಗಮನ ಸೆಳೆದಿದ್ದೆ.
ಇದಾದ ಬಳಿ ಕಬೀರ್ ಉಲ್ಲಾಳ್ ಆ ಸಬ್ ಇನ್ಸ್ ಸ್ಪೆಕ್ಟರ್ ಮಾಡಿದ ದೌರ್ಜನ್ಯದ ಬಗ್ಗೆ ನ್ಯಾಯಾಲಯದ ಮೂಲಕ ದೂರು ದಾಖಲಿಸಿದ್ದರು. ಬರೋಬ್ಬರಿ 14 ವರ್ಷದ ಬಳಿಕವೂ ಈ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ ! ಇಂದು ನಾನು ಕೋರ್ಟ್ ಸಮನ್ಸ್ ಮೇರೆಗೆ ನ್ಯಾಯಾಲಯಕ್ಕೆ ಹಾಜರಾಗಿ ಅಂದು ನಡೆದ ಘಟನೆಯ ಬಗ್ಗೆ ಸಾಕ್ಷ್ಯ ನುಡಿದೆ. ವಕೀಲರು ಏನೇ ಹರಸಾಹಸಪಟ್ಟರೂ ನಾನು ಹೇಳಬೇಕದ್ದನ್ನು ಹೇಳಿ ಬಂದೆ. ಕೊನೆಗೆ ಏನೂ ತೋಚದೇ ಇದ್ದಾಗ “ನಿಮ್ಮ ಪತ್ರಕರ್ತರ ಬುದ್ದಿ ಇಲ್ಲಿ ತೋರಿಸಬೇಡಿ” ಎಂದು ನನ್ನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನನಗೆ “ಪತ್ರಕರ್ತರ ಬುದ್ದಿ ಇದೆ” ಎಂದು ಹೇಳಿದ್ದಕ್ಕೆ ಧನ್ಯವಾದ ಅರ್ಪಿಸಿದೆ. ಏನೇ ಹರಸಾಹಸ ಪಟ್ಟರೂ ಪೊಲೀಸ್ ದೌರ್ಜನ್ಯದ ಬಗ್ಗೆ ಏನು ಹೇಳಬೇಕೋ ಎಲ್ಲವನ್ನೂ ಹೇಳಿ ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಿಸಿದೆ.
ಕಬೀರ್ ಉಲ್ಲಾಳ್ ರಂತಹ ಮಾನವ ಹಕ್ಕು ಕಾರ್ಯಕರ್ತರ ಬೆನ್ನಿಗೆ ನಾವು ನಿಲ್ಲದಿದ್ದರೆ ಹೇಗೆ ಅಲ್ವೇ ?

  • ನವೀನ್ ಸೂರಿಂಜೆ