ಯೆಡಿಯೂರಪ್ಪರ ರಾಜಕೀಯ ತಂತ್ರಗಾರಿಕೆಗೆ ಬೆಚ್ಚಿ,ಬೆರಗಾಗಿ, ಮಂಡಿಯೂರಿದ ಬಿಜೆಪಿ ಹೈಕಮಾಂಡ್

ರಾಜ್ಯ

ಮಾಜಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ಘೋಷಣೆ ಮಾಡಿರುವುದು ಈ ತಲ್ಲಣಕ್ಕೆ ಕಾರಣ.ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ .ಶಿಕಾರಿಪುರ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸುತ್ತಾರೆ, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಶ್ರಮಿಸುತ್ತೇನೆ, ಮನೆಯಲ್ಲಿ ಕೂರೋ ಮಾತೇ ಇಲ್ಲ ಎಂದೂ ಘೋಷಿಸಿದ್ದರು.ಇದು ಬಿಜೆಪಿ ಪಕ್ಷದಲ್ಲಿ ಎಂಥಾ ತಳಮಳಕ್ಕೆ ಕಾರಣವಾಯಿತೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು, ಸಚಿವರು,ಯಡಿಯೂರಪ್ಪ ನಿವಾಸಕ್ಕೆ ದೌಢಾಯಿಸಿ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ದುಂಬಾಲು ಬಿದ್ದು,ಅವರ ಮನವೊಲಿಸುವ ಮಾತಾಡಿದ್ದರು.

ಆದರೆ ಯಡಿಯೂರಪ್ಪ ತಮ್ಮ ನಿಲುವಿಗೆ ಬಿಗಿಯಾಗಿ ಅಂಟಿಕೊಂಡಿದ್ದಾರೆ.ಇದು ಪಕ್ಷದಲ್ಲಿ ತಲ್ಲಣ ತಂದಿದೆ. ಬಿಜೆಪಿ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಲು ಯಡಿಯೂರಪ್ಪ ನಡೆಸಿದ ಹೋರಾಟಗಳೇ ಕಾರಣ ಎಂಬುದು ಸೂರ್ಯ ಚಂದ್ರರಷ್ಟೆ ಸತ್ಯ.ಬಿಜೆಪಿ ಪಕ್ಷ ಅಧಿಕಾರ ಹಿಡಿಯುವಂತಾಗಿದ್ದೂ ಅವರ ಕಾರ್ಯತಂತ್ರದಿಂದಾಗಿದೆ . ಅವರ ಹೋರಾಟ,ಛಲ, ಕಾರ್ಯತಂತ್ರದಿಂದಲೇ ಅವರು ಪ್ರಬಲ ಮತ್ತು ಪ್ರಶ್ನಾತೀತ ನಾಯಕನಾಗಿ ರೂಪುಗೊಂಡಿದ್ದಾರೆ. ತಮ್ಮ ನಾಲ್ಕು ದಶಕಗಳ ರಾಜಕಾರಣದ ಮಧ್ಯೆ ಬಿಜೆಪಿಯಿಂದ ಮುನಿಸಿಕೊಂಡು ದೂರವಾಗಿ ಕೆಜೆಪಿ ಪಕ್ಷ ಕಟ್ಟಿದಾಗಲೂ ವಿಧಾನಸಭೆಗೆ ತಮ್ಮ ಪಕ್ಷದ ಎಂಟು ಶಾಸಕರು ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿ ಆಗಿದ್ದರು. ಕೆಜೆಪಿ ಸ್ಪರ್ಧೆಯಿಂದ ಬಿಜೆಪಿ ಮತಗಳು ಹಂಚಿ ಹೋಗಿ ಅಧಿಕಾರಕ್ಕೆ ಬರುವ ಅವಕಾಶ ಕೈ ತಪ್ಪಿತ್ತು. ನಂತರದ ದಿನಗಳಲ್ಲಿ ಯೆಡಿಯೂರಪ್ಪರ ಶಕ್ತಿಯನ್ನು ಮನಗಂಡು,ಶರಣಾಗಿ ಬಿಜೆಪಿ ಹೈಕಮಾಂಡ್ ಅವರನ್ನು ವಾಪಸು ಸೇರಿಸಿಕೊಂಡು ನಾಯಕತ್ವ ನೀಡಿತು. ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ನಂತರ ಮೈತ್ರಿ ಪತನಗೊಂಡು,ಮತ್ತೆ ಚುನಾವಣೆ ಎದುರಿಸಿ ಹೆಚ್ಚು ಸ್ಥಾನಗಳಿಸಿದ್ದೂ ಅವರ ಕಾರ್ಯತಂತ್ರದ ಒಂದು ಭಾಗವೇ ಆಗಿದೆ.ಕಾಂಗ್ರೆಸ್ ಜೆಡಿಎಸ್ 19 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿ ನಂತರ ಬಿಜೆಪಿ ಸರ್ಕಾರ ರಚನೆ ಆಗಲೂ ಯಡಿಯೂರಪ್ಪರವರು ಹೈಕಮಾಂಡ್ ಸೂಚನೆಯನ್ನೂ ಮೀರಿ ಅನುಸರಿಸಿದ ರಾಜಕೀಯ ನಡೆಯೇ ಕಾರಣ. ಅಪಸ್ವರ ಎತ್ತಿದ್ದ ಪಕ್ಷದ ವರಿಷ್ಟರು ಕಡೆಗೂ ಯಡಿಯೂರಪ್ಪರವರ ತಂತ್ರ ಗಾರಿಕೆಯನ್ನು ಒಪ್ಪಿಕೊಳ್ಳಲೇಬೇಕಾಯಿತು.

ಯಡಿಯೂರಪ್ಪರ ರಾಜಕೀಯ ತಂತ್ರ ಗಾರಿಕೆಯಲ್ಲಿ ಎತ್ತಿದ ಕೈ ಎಂಬುದನ್ನು ಅವರು ಅಧಿಕಾರಕ್ಕೆ ಏರುವ ಸಂದರ್ಭದಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯೇ ದೃಢ ಪಡಿಸಿದೆ. ವಸ್ತು ಸ್ಥಿತಿ ಹೀಗಿರುವಾಗ ಚುನಾವಣೆ ಬಂದು ಮನೆಯ ಬಾಗಿಲು ಬಡಿಯುತ್ತಿರುವ ಈ ಹೊತ್ತಲ್ಲಿ ಅವರು ನಿವೃತ್ತಿಯ ಮಾತು ಆಡಿರುವುದು ಸಹಜವಾಗಿಯೇ ಕಳವಳ ತಂದಿದೆ.ಅವರ ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಚುನಾವಣಾ ರಾಜಕಾರಣಕ್ಕೆ ಮೊದಲೇ ಧುಮುಕಿದರೂ ಸಹೋದರ ವಿಜಯೇಂದ್ರನಂತೆ ರಾಜಕಾರಣದಲ್ಲಿ ಸದ್ದು ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ವಿಜಯೇಂದ್ರ ನಡೆಸಿದ ಕಾರ್ಯಾಚರಣೆಗಳು, ತಂತ್ರಗಾರಿಕೆಗಳು ಅವರನ್ನು ರಾಜಕಾರಣದ ಮುಖ್ಯವಾಹಿನಿಗೆ ತಂದು ನಿಲ್ಲಿಸಿವೆ. ಅಲ್ಲಿಂದಾಚೆ ಅವರು ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದ ಯುವ ನೇತಾರ ಎಂದು ಗುರುತಿಸಲ್ಪಟ್ಟಿದ್ದಾರೆ.

ಇದೀಗ ಮುಂಬರುವ ವಿಧಾನಸಭೆ ಚುನಾವಣೆಗೆ ಮೈಸೂರಿನ ವರುಣಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುತ್ತಾರೆ ಎಂಬ ಗುಲ್ಲೆದ್ದಿದೆ.ಆದರೆ ವಸ್ತು ಸ್ಥಿತಿಯೇ ಬೇರೆಯೇ ಇದೆ. ಯಡಿಯೂರಪ್ಪನವರ ರಾಜಕೀಯ ಉತ್ತರಾದಿಕಾರಿ ಎಂದೇ ಗುರುತಿಸಲ್ಪಡುವ ವಿಜಯೇಂದ್ರ ಈಗಾಗಲೇ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ಪೂರ್ವ ತಯಾರಿ ಆರಂಭಿಸಿದ್ದಾರೆ. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಅವರ ಸಂಘಟನಾ ಕುಶಲತೆ ಹುಬ್ಬೇರುವಂತೆ ಮಾಡಿದೆ.
ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿನ ಮತದಾರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಕಾರ್ಯಾಚರಣೆ ಫಲ ಕೊಟ್ಟಿದೆ. ಇತರ ಪಕ್ಷಗಳು ಅಭ್ಯರ್ಥಿಯನ್ನು ಘೋಷಿಸಿ ಪ್ರಚಾರಕ್ಕೆ ಇಳಿಯುವ ಮುನ್ನವೇ ವಿಜಯೇಂದ್ರ ಮತದಾರರನ್ನು ಮುಟ್ಟಿದ್ದಾರೆ.

ಯಡಿಯೂರಪ್ಪನವರೊಂದಿಗೆ ದಶಕಗಳ ಕಾಲ ಚುನಾವಣೆಯಲ್ಲಿ ದುಡಿದು ಪಳಗಿದ ಗುರುಮೂರ್ತಿ ಯಂತಹ ಅನೇಕ ಪ್ರಮುಖ ಮುಖಂಡರು ಅವರ ಬೆಂಬಲಕ್ಕೆ ನಿಂತು ಉಸ್ತುವಾರಿ ವಹಿಸುತ್ತಿದ್ದಾರೆ. ವಿಜಯೇಂದ್ರ ಶಿಕಾರಿಪುರದಿಂದಲೇ ವಿಧಾನಸಭೆಗೆ ಸ್ಪರ್ಧಿಸುತ್ತಾರೆ. ಹಾಗಿದ್ದರೆ ವರುಣಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರ ಸ್ಪರ್ಧೆ ಕುರಿತಂತೆ ಕೇಳಿ ಬರುತ್ತಿರುವ ಸುದ್ದಿಗಳು ಪ್ರತಿಪಕ್ಷಗಳನ್ನು ದಿಕ್ಕು ತಪ್ಪಿಸುವ ತಂತ್ರ ಎಂಬುದನ್ನು ಬಿಜೆಪಿ ಮೂಲಗಳು ಒಪ್ಪಿಕೊಳ್ಳುತ್ತವೆ.

ಯಡಿಯೂರಪ್ಪರ ಹೇಳಿಕೆ ವಿಚಾರದಲ್ಲಿ ಬಿಜೆಪಿ ನಾಯಕತ್ವ ತಲ್ಲಣಗೊಂಡಿರುವುದು ಯಾಕೆ.? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಪಕ್ಷದಲ್ಲಿ ತಮ್ಮ ಬಿಗಿಯಾದ ಹಿಡಿತ ಹೊಂದುವ ಮೂಲಕ ತಾನೊಬ್ಬ ಮಾಸ್ ಲೀಡರ್ ಎಂಬ ವರ್ಚಸ್ಸು ಉಳಿಸಿಕೊಳ್ಳುವ ಉದ್ದೇಶ ಇರುವುದು ಗೊತ್ತಾಗುತ್ತದೆ.
ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಸಿಗುವಂತೆ ನೋಡಿಕೊಳ್ಳುವುದು ಹಾಗೆಯೇ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಟಿಕೆಟ್ ತಪ್ಪುವಂತೆ ಮಾಡುವುದೂ ಇದೆಲ್ಲದರ ಹೊರತಾಗಿಯೂ ಚುನಾವಣೆ ನಂತರ ಬಹುಮತ ಬಂದರೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಚನೆಯ ವಿಚಾರದಲ್ಲಿ ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯೂ ಅಡಗಿದೆ.ಅ ಮೂಲಕ ವಿಜಯೇಂದ್ರನನ್ನು ಅಧಿಕಾರದ ಪಟ್ಟಕ್ಕೆ ಕೂರಿಸುವುದು ಯಡಿಯೂರಪ್ಪನವರ ರಾಜಕೀಯತಂತ್ರ. ಬಿಜೆಪಿ ಶಾಸಕ ಯತ್ನಾಳ್ ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ಯುದ್ಧಕ್ಕೆ ಇಳಿದಿದ್ದು,ಪಕ್ಷದ ಕೆಲವು ಕೇಂದ್ರ ನಾಯಕರು ಹಾಗೂ ರಾಜ್ಯ ಘಟಕದ ಒಂದು ಗುಂಪು ಮೌನವಾಗಿ ಅವರ ಬೆನ್ನಿಗೆ ನಿಂತಿದೆ.

ಈ ವಿಚಾರದಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸುತ್ತಿಲ್ಲ. ಇದು ಅವರ ಜಾಣತನ. ಅವರಿಗೆ ಸಮುದಾಯದ,ಮಠಾಧೀಶರ ಬೆಂಬಲವೂ ಇದೆ. ಬರೀ ಮೋದಿ ಹೆಸರಿನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವಿಲ್ಲ. ಎಂಬ ಅಂಶ ಇದೀಗ ಬಿಜೆಪಿಯೇ ನಡೆಸಿರುವ ಇತ್ತೀಚಿನ ಸಮೀಕ್ಷೆಗಳಿಂದ ವ್ಯಕ್ತವಾಗಿದೆ.ಇಂತಹ ಸನ್ನಿವೇಶದಲ್ಲಿ ತಮ್ಮ ರಾಜಕೀಯ ತಂತ್ರಗಾರಿಕೆಯ ಮೂಲಕ ಬಿಜೆಪಿ ಹೈಕಮಾಂಡ್ ನ್ನು ಕಟ್ಟಿ ಹಾಕಿ, ಅಂಕೆಯಲ್ಲಿಟ್ಟುಕೊಳ್ಳುವುದು ಅವರ ತಂತ್ರ.ಅದು ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದೆ.ಯಡಿಯೂರಪ್ಪರವರ ಪ್ರಾಬಲ್ಯ ಮುಂದುವರಿದರೆ ತಮ್ಮ ಗತಿ ಏನು.? ಎಂಬ ಆತಂಕ ಕಾಡುತ್ತಿದೆ ಸಿಎಂ ಪಟ್ಟಕ್ಕೆರಲು ರೇಸ್ ನಲ್ಲಿರುವ ಬಹಳಷ್ಟು ಮಂದಿ ಪ್ರಮುಖರಿಗೆ.! ಇದು ರಾಷ್ಟ್ರೀಯ ಪಕ್ಷವೊಂದರ ದುರ್ಗತಿಯೂ ಹೌದು!