ಪದೇ ಪದೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

ರಾಜ್ಯ

ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆ ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಶನಿವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಪದೇ ಪದೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಪ್ರಸಂಗ ನಡೆದಿದೆ. ಆ ಸಂದರ್ಭದಲ್ಲಿ ಅವರ ಪಕ್ಕದಲ್ಲಿಯೇ ಇದ್ದ ಬಿಜೆಪಿ ಮುಖಂಡರು ನಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾರತದ ಪ್ರಧಾನಿ ನರೇಂದ್ರಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ಮಂಡ್ಯದ ಸಂಜಯ ವೃತ್ತದಲ್ಲಿ ಶನಿವಾರ ಬಿಜೆಪಿ ಪ್ರತಿಭಟನೆ ನಡೆಸಿತು. ಆ ಸಂದರ್ಭದಲ್ಲಿ ಕೆಳಗೆ ಕೂತಿದ್ದವರು ಉದ್ದೇಶಪೂರ್ವಕವಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದು ನಂತರ ಇತರ ಮುಖಂಡರು ನಗುತ್ತಾ ಅವರ ಬಾಯಿ ಮುಚ್ಚಿಸುವುದು ಕಂಡುಬಂದಿದೆ.

ಮತ್ತೊಮ್ಮೆ ಮುಖಂಡನೊಬ್ಬ ಜಿಂದಾಬಾದ್, ಜಿಂದಾಬಾದ್ ಎಂದು ಘೋಷಣೆ ಕೂಗಿದಾಗಿ ಬಿಜೆಪಿ ಕಾರ್ಯಕರ್ತನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ನಗುತ್ತಾ ಘೋಷಣೆ ಕೂಗಿದ್ದಾನೆ. ಅಲ್ಲದೆ ಆತನ ಪಕ್ಕದಲ್ಲಿದ್ದ ಇತ್ತೀಚೆಗೆ ಬಿಜೆಪಿ ಸೇರಿದ ಮುಖಂಡ ಇಂಡುವಾಳು ಸಚ್ಚಿದಾನಂದ ನಕ್ಕಿದ್ದಾರೆ. ಮತ್ತೊಮ್ಮೆ ಬಿಜೆಪಿ ಮುಖಂಡ ಆತನ ವಿರುದ್ಧ ಕೈ ತೋರಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಅಲ್ಲಿ ನೆರೆದಿದ್ದ ಯಾರೊಬ್ಬರೂ ಸಹ ಪಾಕಿಸ್ತಾನ ಜಿಂದಾಬಾದ್ ಎಂದ ಬಿಜೆಪಿ ಕಾರ್ಯಕರ್ತನ ವಿರುದ್ಧ ಮಾತನಾಡಿಲ್ಲ ಎಂಬುದು ಅಚ್ಚರಿ ಎನಿಸಿದೆ.ಇದ್ದಕ್ಕಿದ್ದಂತೆ ಆ ಬಿಜೆಪಿ ಕಾರ್ಯಕರ್ತರು ಎರಡೆರಡು ಬಾರಿ ಪಾಕಿಸ್ತಾನ ಜಿಂದಾಬಾದ್ ಎಂದು ಉದ್ದೇಶಪೂರ್ವಕವಾಗಿ ಕುಚೇಷ್ಟೆಗೆ ಕೂಗಿದ್ದಾರೆ. ಬೇರೆಯವರಿಗೆ ಸದಾ ದೇಶಭಕ್ತಿಯ ಪಾಠ ಹೇಳುವ ಬಿಜೆಪಿ ಪಕ್ಷದ ಕಾರ್ಯಕರ್ತನೇ ಈ ರೀತಿ ಘೋಷಣೆ ಕೂಗಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಘೋಷಣೆ ಕೂಗಿದ ದೇಶದ್ರೋಹಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.