ಹಲಾಲನ್ನು ಹರಾಂ ಮಾಡಲು ಹೊರಟ ಪರಿಷತ್ ಸದಸ್ಯ ರವಿಕುಮಾರ್.ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡನೆ

ರಾಜ್ಯ

ರಾಜ್ಯದಲ್ಲಿ ‘ಹಲಾಲ್‌’ ಲೇಬಲ್‌ ಹಾಕಿದ ಆಹಾರ ಪದಾರ್ಥಗಳ ಮಾರಾಟ ನಿಷೇಧಕ್ಕಾಗಿ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸಲಿದ್ದಾರೆ

ಈ ಸಂಬಂಧ ಖಾಸಗಿ ಮಸೂದೆಯನ್ನು ಮಂಡಿಸಲು ಅವರು ವಿಧಾನಪರಿಷತ್‌ ಸಭಾಪತಿಯವರಿಗೆ ಬುಧವಾರ ನೋಟಿಸ್‌ ನೀಡಿದ್ದಾರೆ.
ಆಹಾರ ಪದಾರ್ಥಗಳ ಮೇಲೆ ‘ಹಲಾಲ್‌’ ಲೇಬಲ್‌ ಹಾಕಿ ಮಾರುವುದನ್ನು ನಿಷೇಧಿಸಬೇಕು. ಇದಕ್ಕಾಗಿ ‘ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ’ಗೆ ಸೂಕ್ತ ತಿದ್ದುಪಡಿ ಅಗತ್ಯವಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕಾಗಿದೆ ಎಂದು ಹೇಳಿದ್ದಾರೆ.

‘ಹಲಾಲ್‌ ಪ್ರಮಾಣ ಪತ್ರವನ್ನು ಮುಸ್ಲಿಂ ಧಾರ್ಮಿಕ ಸಂಸ್ಥೆಗಳು ಮಾತ್ರ ನೀಡುತ್ತವೆ. ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳಿಗೆ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಯಾವುದೇ ಧಾರ್ಮಿಕ ಸಂಸ್ಥೆಗಳಿಗೂ ಇಲ್ಲ. ಸರ್ಕಾರ ಧಾರ್ಮಿಕ ಸಂಸ್ಥೆಗಳಿಗೆ ಮಾನ್ಯತೆಯನ್ನೂ ನೀಡಿಲ್ಲ. ಹಲಾಲ್‌ ಪ್ರಮಾಣ ಪತ್ರ ನೀಡುವವರು ಸರ್ಕಾರದ ಅನುಮತಿಯನ್ನೂ ಪಡೆದಿಲ್ಲ. ಎಫ್‌ಎಸ್‌ಎಸ್‌ಎಐ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗಳೂ ಪ್ರಮಾಣ ಪತ್ರ ನೀಡುವಂತಿಲ್ಲ. ಒಂದು ವೇಳೆ ನೀಡಿದರೆ ಅದು ಅಪರಾಧವಾಗುತ್ತದೆ’ ಎಂದು ಅವರು ನೋಟಿಸ್‌ನಲ್ಲಿ ವಿವರಿಸಿದ್ದಾರೆ.
‘ಚಾಕೊಲೇಟ್‌, ಅಕ್ಕಿ, ಬೇಳೆ, ಸಕ್ಕರೆ ಸೇರಿದಂತೆ ಎಲ್ಲ ರೀತಿಯ ದಿನಸಿ ಪದಾರ್ಥಗಳ ಪ್ಯಾಕ್‌ಗಳ ಮೇಲೆ ಹಲಾಲ್‌ ಲೋಗೊ ಹಾಕಿರುತ್ತಾರೆ. ಈ ಪ್ರಮಾಣ ಪತ್ರವನ್ನು ಅಂಟಿಸುವ ಮೂಲಕ ಧಾರ್ಮಿಕ ಸಂಸ್ಥೆಗಳು ಕಂಪನಿಗಳಿಂದ ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತವೆ ಮತ್ತು ಆ ಹಣವನ್ನು ಇಸ್ಲಾಂ ಧಾರ್ಮಿಕ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಇದು ಕಾನೂನು ಬಾಹಿರ’ ಎಂದು ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಮುಸ್ಲಿಮರು ಕೇವಲ ಮುಸ್ಲಿಮ್‌ ಕಂಪನಿಗಳ ವಸ್ತುಗಳನ್ನು ಮಾತ್ರ ಖರೀದಿಸಬೇಕು ಎಂಬ ಉದ್ದೇಶವೂ ಇದರ ಹಿಂದೆ ಅಡಗಿದೆ. ಇದು ಜಾಗತಿಕ ಆರ್ಥಿಕ ಸಮರವಾಗಿದೆ’ ಎಂದರು.ಹಲಾಲ್‌ ಹಾವಳಿ ಯಾವ ಮಟ್ಟಕ್ಕೆ ಮೇರೆ ಮೀರಿದೆ ಎಂದರೆ, ನೆರೆ ರಾಜ್ಯಗಳಲ್ಲಿ ನರ್ಸಿಂಗ್‌ ಹೋಂಗಳು ಮತ್ತು ಖಾಸಗಿ ಆಸ್ಪತ್ರೆಗಳ ಮೇಲೂ ಹಲಾಲ್‌ ಬೋರ್ಡ್‌ ಹಾಕಿರುತ್ತಾರೆ. ಕೆಲವು ಔಷಧ ಕಂಪನಿಗಳೂ ಹಲಾಲ್‌ ಲೇಬಲ್‌ ಹಾಕಿ ಔಷಧ ಮಾರಾಟ ಮಾಡುತ್ತಿರುವ ಉದಾಹರಣೆಗಳೂ ಇವೆ. ದೇಶದಲ್ಲಿ ತಮ್ಮ ಮಾರುಕಟ್ಟೆ ಕುಸಿಯಬಹುದು ಎಂಬ ಭೀತಿಯಿಂದ ದೇಶದೊಳಗೆ ಹಲಾಲ್‌ ಲೇಬಲ್‌ ಹಾಕುವುದಿಲ್ಲ. ರಫ್ತು ಮಾಡುವಾಗ ಎಲ್ಲ ಉತ್ಪನ್ನಗಳ ಮೇಲೂ ಹಲಾಲ್‌ ಲೇಬಲ್‌ ಹಾಕುತ್ತಿವೆ’ ಎಂದು ದೂರಿದ್ದಾರೆ.