NPS ವಿರೋಧಿ ಆಂದೋಲನ : ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಜಧಾನಿ ಪ್ರವೇಶಿಸಿದ ಸರ್ಕಾರಿ ನೌಕರರು

ರಾಷ್ಟ್ರೀಯ

ಕೇಂದ್ರ ಸರ್ಕಾರದ NPS (ಹೊಸ ಪಿಂಚಣಿ ಯೋಜನೆ) ಯೋಜನೆಗೆ ಮೊದಲಿನಿಂದಲೂ ದೊಡ್ಡ ಮಟ್ಟದ ವಿರೋಧವಿದ್ದು, ಈಗ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಆಂದೋಲನವೇ ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಲಕ್ಷೋಪಾದಿಯಲ್ಲಿ ಬಂದು ಸೇರಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ಭವಿಷ್ಯದಲ್ಲಿ ಆಗುವ ಸಮಸ್ಯೆಗಳನ್ನು ಮನಗಂಡು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಹಲವು ರಾಜ್ಯ ಸರ್ಕಾರಗಳು ಈ ಯೋಜನೆಯನ್ನೇ ರದ್ದುಪಡಿಸಿವೆ. ಕಳೆದ ಕೆಲವೇ ದಿನಗಳ ಹಿಂದೆ ಸರ್ಕಾರ ರಚಿಸಿದ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಕೂಡಾ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸುವ ಆಶ್ವಾಸನೆ ಕೊಟ್ಟಿದ್ದು, ಹೊಸ ಸರ್ಕಾರ ರಚನೆಯ ತಕ್ಷಣವೇ ಕೊಟ್ಟ ಭರವಸೆಯಂತೆ ಯೋಜನೆ ರದ್ದುಪಡಿಸಿದೆ.

ಸಧ್ಯ ಕರ್ನಾಟಕದಲ್ಲೂ ಹಿಂದಿನಿಂದ ಇದಕ್ಕೆ ವಿರೋಧವಿದ್ದು ಇಲ್ಲಿಯವರೆಗೆ ಅಲ್ಲಲ್ಲಿ ಈ ಯೋಜನೆ ವಿರೋಧಿಸಿ, ಪ್ರತಿಭಟನೆ, ಧರಣಿ ನಡೆಯುತ್ತಲೇ ಇತ್ತು. ಆದರೆ ಈಗ ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ನೌಕರರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಪ್ರಮಾಣದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭವಾಗಿದೆ.
ರಾಜ್ಯದ ನಾನಾ ಕಡೆಗಳಿಂದ ಸರ್ಕಾರಿ ನೌಕರರು ಫ್ರೀಡಂ ಪಾರ್ಕ್ ಬಳಿ ಸೇರಿದ್ದು ಸಧ್ಯ ಪ್ರೀಡಂ ಪಾರ್ಕ್ ನಲ್ಲಿ ಕಾಲಿಡಲೂ ಜಾಗವಿಲ್ಲದಂತಾಗಿದೆ. ಧರಣಿಯ ಹೆಚ್ಚಿನ ಕಡೆಗಳಲ್ಲಿ ಸರ್ಕಾರಕ್ಕೆ ನೌಕರರು ಎಚ್ಚರಿಕೆ ಕೊಡುತ್ತಿದ್ದು “ಹಿಮಾಚಲ ಪ್ರದೇಶದ ಫಲಿತಾಂಶ ಬೇಕೋ, ಗುಜರಾತ್ ಫಲಿತಾಂಶ ಬೇಕೋ ನೀವೇ ನಿರ್ಧರಿಸಿ” ಎಂಬಂತಹ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲಾ ಸರ್ಕಾರಿ ನೌಕರರು ನೀಲಿ ಟೀ ಶರ್ಟ್, ಗಾಂಧಿ ಟೋಪಿಯ ಸಮವಸ್ತ್ರ ಧರಿಸಿದ್ದು, ರಾಜ್ಯದ ಪ್ರತೀ ತಾಲ್ಲೂಕುಗಳಿಂದ ಫ್ರೀಡಂ ಪಾರ್ಕ್ ಗೆ ಬಂದಿಳಿದಿದ್ದಾರೆ. ಚನ್ನರಾಯಪಟ್ಟಣದಿಂದ ಸರ್ಕಾರಿ ನೌಕರರ ಒಂದು ದೊಡ್ಡ ಗುಂಪು ಸೈಕಲ್ ಜಾತಾ ಮೂಲಕ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಸರ್ಕಾರಿ ನೌಕರರೇ ತಿರುಗಿ ಬೀಳುವ ಎಲ್ಲಾ ಮುನ್ಸೂಚನೆ ನೀಡಿದ್ದಾರೆ.
“ತೊಲಗಲಿ ತೊಲಗಲಿ NPS ತೊಲಗಲಿ, Vote for OPS” ಘೋಷಣೆಗಳು ಮುಗಿಲು ಮುಟ್ಡುತ್ತಿವೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನೇ ನೌಕರರು ಗುರಿಯಾಗಿಟ್ಟುಕೊಂಡು ಸರ್ಕಾರಕ್ಕೆ ಸರಿಯಾದ ಬಿಸಿ ಮುಟ್ಟಿಸಲು ಹೊರಟಿದ್ದಾರೆ.