ಬಿಜೆಪಿಯಲ್ಲಿ ಅಂತರಿಕ ನಾಯಕತ್ವದ ಕಚ್ಚಾಟವೇ ಮುಳುವಾಯಿತೇ.?

ರಾಜ್ಯ

ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಇತ್ತೀಚಿಗೆ ಅದರ ಹಮ್ಮು ಬಿಮ್ಮೆಲ್ಲಾ ಯಡಿಯೂರಪ್ಪರ ಮುನಿಸಿನೊಂದಿಗೆ ಕಾಣಿಸಿಕೊಂಡಿತು. ಕೊಪ್ಪಳದಲ್ಲಿ ನಡೆದ ಸಂಕಲ್ಪ ಯಾತ್ರೆಯಲ್ಲಿಮಾಸ್ ಲೀಡರ್ ಮಾಜಿ ಮುಖ್ಯಮಂತ್ರಿ,ಬಿಎಸ್ ಯಡಿಯೂರಪ್ಪ ಅವರ ಹೆಸರು ಕಾಣಲಿಲ್ಲ, ಇದು ಅವರ ಬೆಂಬಲಿಗರನ್ನು ಕೆರಳಿಸಿತ್ತು, ಇದರ ಜೊತೆಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ಸ್ಪಷ್ಟವಾಗಿತ್ತು, ಕಾರ್ಯಕರ್ತರ ಅಸಮಾಧಾನ ಪಕ್ಷಕ್ಕೆ ಒಳ್ಳೆಯದಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತ್ತು.

ನಂತರ ಅವರನ್ನು ಹೇಗೋ ಹೈಕಮಾಂಡ್ ಮನವೊಲಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಗಿತ್ತು. ಆದರೆ ಅವರ ಅಸಮಾಧಾನ ಮಾತ್ರ ಅಂತ್ಯವಾಯಿತು ಅನ್ನುವಂತಿಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿ ಸ್ಪರ್ಧೆ ನೀಡುವ ಮುನ್ಸೂಚನೆ ನೀಡಿದೆ. ಸಿದ್ಧರಾಮೋತ್ಸವ, ಭಾರತ್ ಜೋಡೊಯಾತ್ರೆ ಸೇರಿದಂತೆ ಹಲವು ಹೋರಾಟಗಳು ಕಾಂಗ್ರೆಸ್’ಗೆ ತಳ ಮಟ್ಟದಲ್ಲಿ ಶಕ್ತಿ ತುಂಬಿದ್ದು ಮಾತ್ರ ಸುಳ್ಳಲ್ಲ.

ಕಾಂಗ್ರೆಸ್ ಎದುರಿಸಲು ಸಾಮರ್ಥ್ಯವಿರುವ ಬಿಜೆಪಿ ಸಮರ್ಥ ನಾಯಕ ಯಡಿಯೂರಪ್ಪ.ಅವರನ್ನು ಉತ್ತಮವಾಗಿ ನಡೆಸಿಕೊಳ್ಳುವುದು, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹೋರಾಡಲು ಅವರನ್ನು ಪ್ರಮುಖ ವೇದಿಕೆಗೆ ತರುವುದು ಸಿಎಂ ಮತ್ತು ಪಕ್ಷದ ನಾಯಕರ ಮೇಲಿರುವ ಜವಾಬ್ದಾರಿ.ಪ್ರಬಲವಾದ ಲಿಂಗಾಯತ ಸಮುದಾಯ ಮತ್ತು ಗ್ರಾಮೀಣ ಜನಸಮೂಹದಲ್ಲಿ ಅತಿ ಹೆಚ್ಚು ಪ್ರಭಾವಿ ನೆಲೆಯನ್ನು ಹೊಂದಿರುವುದರಿಂದ ಒಗ್ಗಟ್ಟಿನ ಕಾಂಗ್ರೆಸ್‌ಗಿಂತ ಕೇಸರಿ ಬ್ರಿಗೇಡ್‌ಗೆ ಯಡಿಯೂರಪ್ಪ ಹೆಚ್ಚು ಅಪಾಯಕಾರಿಯಾಗುತ್ತಾರೆ. ಇದು ಪಕ್ಷದ ಚುನಾವಣಾ ಭವಿಷ್ಯವನ್ನು ಹಾಳುಮಾಡಬಹುದು. ಏಕೆಂದರೆ ಹಿಂದೆ, ಅವರು ಕೆಜೆಪಿ ಪಕ್ಷವನ್ನು ಕಟ್ಟಿದ್ದಾಗ ಶೇ. 9.5 ರಷ್ಚು ಮತಗಳನ್ನು ಗಳಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.2013 ರಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಇದು ಕಾರಣವಾಯಿತು.

ಬಿಜೆಪಿಯ ಸಣ್ಣ ತಪ್ಪು ಲೆಕ್ಕಾಚಾರಗಳು ಪಕ್ಷಕ್ಕೆ ಮಾರಕವಾಗಬಹುದು ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಲಿಂಗಾಯತ ಸಮುದಾಯವು ಬೊಮ್ಮಾಯಿ ಅವರನ್ನು ಸಂಪೂರ್ಣವಾಗಿ ತಮ್ಮ ನಾಯಕನನ್ನಾಗಿ ಸ್ವೀಕರಿಸಿಲ್ಲ. ಯಡಿಯೂರಪ್ಪ ಅವರ ಸ್ವಾಭಾವಿಕ ಉತ್ತರಾಧಿಕಾರಿ ಪುತ್ರ ಬಿ.ವೈ.ವಿಜಯೇಂದ್ರ ಎಂಬುದನ್ನು ಪಕ್ಷ ಯಾವುದೇ ತಕರಾರಿಲ್ಲದೇ ಒಪ್ಪಿಕೊಳ್ಳಬೇಕು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇಲ್ಲಿ ಎಡವಿದರೆ ವಿಧಾನ ಸಭಾ ಚುನಾವಣೆಯಲ್ಲಿ ‌ಬಿಜೆಪಿಗೆ ಮತ್ತೆ ಅಧಿಕಾರದ ಬಾಗಿಲು ಬಂದ್ ಆಗಲಿದೆ.