ಐವನ್ ರನ್ನು ಕೈ ಬಿಟ್ಟು, ಲೋಬೋ ಬೆನ್ನಿಗೆ ನಿಂತ ಕ್ರೈಸ್ತ ಸಮುದಾಯ

ಕರಾವಳಿ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ನಂಬಿಕಸ್ಥರಾಗಿ ನಿಂತಿರುವ ಸಮುದಾಯಗಳಲ್ಲಿ ಒಂದಾಗಿದೆ ಕ್ರೈಸ್ತ ಸಮುದಾಯ. ಬಹುತೇಕ ಕ್ರೈಸ್ತ ಸಮುದಾಯದ ಮತಗಳು ಕಾಂಗ್ರೆಸ್ ಬುಟ್ಟಿಗೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣಾ ಸಮಯದಲ್ಲಿ ಕ್ರೈಸ್ತ ಧರ್ಮಗುರುಗಳು ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಬಹಿರಂಗವಾಗಿಯೇ ಫರ್ಮಾನು ಹೊರಡಿಸುವುದು ಗುಟ್ಟಿನ ವಿಷಯವೇನಲ್ಲ.

ಇದಕ್ಕೂ ಕಾರಣವಿದೆ. ಅಲ್ಪಸಂಖ್ಯಾತ ಸಮುದಾಯವಾಗಿರುವ ಕ್ರೈಸ್ತ ಸಮುದಾಯ ತಮ್ಮ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಎರಡು ಸೀಟುಗಳನ್ನು ಕಾಂಗ್ರೆಸ್ ಪಕ್ಷ ಕಾಯ್ದಿರಿಸಿದೆ. ಕಾಂಗ್ರೆಸ್ ಆ ಎರಡು ಸೀಟುಗಳನ್ನು ಬಿಟ್ಟುಕೊಡಲು ಯಾವತ್ತೂ ತಯಾರಿಲ್ಲ. ಚುನಾವಣೆಯಲ್ಲಿ ಕ್ರೈಸ್ತ ಸಮುದಾಯದ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೋ.. ಸೋಲುತ್ತಾರೋ.. ಅದು ಎರಡನೆಯ ಮಾತು. ಆದರೆ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಿಸುವುದು ಕ್ರೈಸ್ತ ಸಮುದಾಯಕ್ಕೆ ಅನಿವಾರ್ಯವಾಗಿದೆ. ಆ ಎರಡು ಕ್ಷೇತ್ರಗಳನ್ನು ಮೀಸಲಿಟ್ಟ ಕಾರಣಕ್ಕೆ ಇಡೀ ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸುತ್ತಾರೆ ಎಂಬುದು ಹಿಂದಿನಿಂದ ನಡೆದು ಕೊಂಡು ಬಂದ ರೂಢಿಯಾಗಿದೆ.

ಬೆಂಗಳೂರಿನ ಸರ್ವಜ್ಞನಗರ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಖಾಯಂ ಆಗಿ ಕ್ರೈಸ್ತ ಸಮುದಾಯಕ್ಕೆ ಬಿಟ್ಟುಕೊಟ್ಟಿದೆ. ಸರ್ವಜ್ಞನಗರದಲ್ಲಿ ಕೆ.ಜೆ. ಜಾರ್ಜ್ ಶಾಸಕರಾಗಿದ್ದಾರೆ. ಮಂಗಳೂರು ನಗರ ದಕ್ಷಿಣ ದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಜೆ.ಆರ್.ಲೋಬೋ ಸೋಲು ಕಂಡಿದ್ದರು.

ಈ ಬಾರಿ ಮಂಗಳೂರು ನಗರ ದಕ್ಷಿಣದಲ್ಲಿ ಕಾಂಗ್ರೆಸ್ ಕ್ರೈಸ್ತ ಸಮುದಾಯಕ್ಕೆ ಟಿಕೆಟ್ ಕೊಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಆದರೆ ಕ್ರೈಸ್ತ ಸಮುದಾಯದಲ್ಲಿ ಹಲವು ಆಕಾಂಕ್ಷಿಗಳು ಇದ್ದರೂ ಜೋರಾಗಿ ಕೇಳಿ ಬರುತ್ತಿರುವುದು ಐವನ್ ಡಿಸೋಜ ಹಾಗೂ ಜೆ.ಆರ್. ಲೋಬೋ ಹೆಸರು ಮಾತ್ರ.

ಐವನ್ ಡಿಸೋಜ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕವೂ ಇದೆ. ಆದರೆ ಅವರು ಪ್ರಚಾರ ಪ್ರಿಯರು, ಅನುದಾನಗಳನ್ನು ಕೇವಲ ರಿಕ್ಷಾ ನಿಲ್ದಾಣಕ್ಕೆ ಸೀಮಿತಗೊಳಿಸಿ ಪ್ಲೆಕ್ಸ್ ಹಾಕುವುದರಲ್ಲಿಯೇ ನಿಸ್ಸೀಮರು ಅನ್ನುವ ಮಾತು ಸ್ವಸಮುದಾಯದಿಂದಲೇ ಕೇಳಿಬರುತ್ತಿದೆ. ಕೇವಲ ನಾಯಕರ ಸುತ್ತ ತಿರುಗಾಡುತ್ತರೆಯೇ ವಿನಹ ಸಮುದಾಯಕ್ಕೆ ಅವರಿಂದ ಯಾವುದೇ ಪ್ರಯೋಜನವಿಲ್ಲ ಅನ್ನುವ ಮಾತು ಚಾಲ್ತಿಯಲ್ಲಿದೆ. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಇದ್ದರೂ ಕ್ಷೇತ್ರದ ಕ್ರೈಸ್ತ ಮುಖಂಡರು, ಧರ್ಮಗುರುಗಳು ಐವನ್ ಬೆನ್ನಿಗೆ ನಿಲ್ಲಲು ನಿರುತ್ಸಾಹ ತೋರುತ್ತಿದ್ದು, ಐವನ್ ಬದಲಾಗಿ ಜೆ.ಆರ್.ಲೋಬೋರಿಗೆ ಟಿಕೆಟ್ ನೀಡುವಂತೆ ಹೈಕಮಾಂಡಿಗೆ ಮನವಿ ಮಾಡಿದ್ದಾರೆ ಅನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಐವನ್ ಡಿಸೋಜ ಯಾವುದೇ ಸರ್ಕಸ್ ಮಾಡಿದರೂ ಮಂಗಳೂರು ನಗರ ದಕ್ಷಿಣದಲ್ಲಿ ಟಿಕೆಟ್ ಡೌಟ್ ಅನ್ನುವ ಮಾತು ಕೇಳಿ ಬರುತ್ತಿದೆ. ಕ್ರೈಸ್ತ ಸಮುದಾಯ ಜೆ.ಆರ್.ಲೋಬೋ ಬೆನ್ನಿಗೆ ನಿಂತಿರುವುದರಿಂದ ಈ ಬಾರಿಯೂ ಟಿಕೆಟ್ ಲೋಬೋ ಪಾಲಾಗಲಿದೆ. ಘೋಷಣೆಯೊಂದೇ ಬಾಕಿ ಅನ್ನುವ ಮಾತಿದೆ. ಮಂಗಳೂರಿನ ಪ್ರಮುಖ ಕ್ರೈಸ್ತ ಮುಖಂಡರುಗಳು ಹೈಕಮಾಂಡಿನೊಂದಿಗೆ ಚರ್ಚಿಸಿ ಜೆ.ಆರ್.ಲೋಬೋ ಪರ ವಕಾಲತ್ತು ವಹಿಸಿ ಟಿಕೆಟ್ ಫೈನಲ್ ಗೊಳಿಸಿದ್ದಾರೆ ಅನ್ನುವ ಮಾತಿದೆ.

ಜೆ.ಆರ್.ಲೋಬೋ ನಿವೃತ್ತ ಸರಕಾರಿ ಅಧಿಕಾರಿ. 2013 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸತತವಾಗಿ ಗೆಲ್ಲುತ್ತಿದ್ದ ಯೋಗೀಶ್ ಭಟ್ ರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹೊಸ ಮುಖ ವೇದವ್ಯಾಸ ಕಾಮತ್ ಎದುರು 15,000 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಜಿಲ್ಲೆಯಲ್ಲಿ 8 ರಲ್ಲಿ 7 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದರು. ಬೇರೆ ಅಭ್ಯರ್ಥಿಗಳ ಸೋಲಿನ ಲೆಕ್ಕಾಚಾರ ನೋಡಿದಾಗ ಜೆ.ಆರ್.ಲೋಬೋ ಸೋಲಿನ ಅಂತರ ಕಡಿಮೆಯಾಗಿತ್ತು. ಆದರೆ ಈ ಬಾರಿ ಅದನ್ನೆಲ್ಲ ಮ್ಯಾನೆಜ್ ಮಾಡಬಹುದು ಅನ್ನುವುದು ಕ್ರೈಸ್ತ ಮುಖಂಡರ ಲೆಕ್ಕಾಚಾರ. ಲೋಬೋ ಕ್ರೈಸ್ತ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿರುವುದು ಅವರ ಪರ ಬ್ಯಾಟಿಂಗ್ ಬೀಸಲು ಕ್ರೈಸ್ತ ಮುಖಂಡರು ಕಾರಣ ಅನ್ನುವುದು ಕೇಳಿ ಬರುತ್ತಿದೆ.

ಒಟ್ಟಾರೆಯಾಗಿ ಮಂಗಳೂರಿನ ಕ್ರೈಸ್ತ ಸಮುದಾಯ ಒಗ್ಗಟ್ಟಾಗಿ ಜೆ.ಆರ್. ಲೋಬೋ ಪರ ನಿಂತಿರುವುದರಿಂದ ಟಿಕೆಟ್ ಅವರಿಗೆ ಫಿಕ್ಸ್ ಎಂಬುದು ಖಾತ್ರಿಯಾಗಿದೆ.