ಪೊಲೀಸ್‌ ಠಾಣೆಗೆ ಹೋಗುವ ಮೊದಲು 112 ಗೂ ಕರೆ ಮಾಡಿ ದೂರು ನೀಡಿ : ಪ್ರತಾಪ್‌ ರೆಡ್ಡಿ

ರಾಜ್ಯ

ತೊಂದರೆಗೊಳಗಾದವರು ದೂರು ದಾಖಲಿಸಲು ಪೊಲೀಸ್‌ ಠಾಣೆಗೆ ತೆರಳುವ ಮೊದಲು ಪೊಲೀಸ್‌ ಹೆಲ್ಪ್‌ಲೈನ್‌ 112ಗೆ ಕರೆ ಮಾಡಿ ಮಾಹಿತಿ ಅಥವಾ ದೂರು ಸಲ್ಲಿಸಿ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ನಗರದಲ್ಲಿ ಸೈಬರ್‌ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಬರುವ ಅನಾಮಿಕ ಕರೆಗಳು, ಮೆಸೇಜ್‌ಗಳನ್ನು ನಂಬಿ ಹಣ ವರ್ಗಾವಣೆ ಮಾಡಬಾರದು. ಯಾರು ಸಹ ನಿಮಗೆ ಕಡಿಮೆ ಬೆಲೆಗೆ ಏನನ್ನು ಕೊಡುವುದಿಲ್ಲ. ಈ ರೀತಿಯಾಗಿ ನಿಮಗೆ ಕರೆ ಅಥವಾ ಮೆಸೇಜ್‌ಗಳು ಬಂದರೆ ತಕ್ಷಣವೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಹಾಗೂ 112 ಸೇವೆಯನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದರು.

ವೈಟ್‌ಫೀಲ್ಡ್‌ ವಿಭಾಗದ ಪೊಲೀಸರು ಈ ವರ್ಷ ಕಳ್ಳತನವಾಗಿದ್ದ 16 ಕೋಟಿಗೂ ಅಧಿಕ ಮೌಲ್ಯದ ಬೈಕ್‌ಗಳು, ಆಟೋ, ಜೀಪ್‌, ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಿಂದಿರೂಗಿಸುವ ಕೆಲಸ ಮಾಡಿದ್ದಾರೆ.
ಇಂದು ವೈಟ್‌ಫೀಲ್ಡ್‌ ವಿಭಾಗದ ಪ್ರಾಪರ್ಟಿ ಪರೇಡ್‌ನಲ್ಲಿ ಪೊಲೀಸ್‌ ಕಮೀಷನರ್‌ ಭಾಗಿಯಾಗಿದ್ದರು. ಕಳೆದುಕೊಂಡವರ ಸ್ವತ್ತುಗಳನ್ನು ಮರಳಿಸಿ, ಪೊಲೀಸರ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿ ಹಲವು ಪೊಲೀಸ್‌ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪೊಲೀಸ್‌ ಕಮೀಷನರ್‌ ಪ್ರತಾಪ್‌ ರೆಡ್ಡಿ ಯಾವುದೇ ಪ್ರಕರಣಗಳಾದರೂ ನಿಮಗೆ 24X7 ಪೊಲೀಸ್‌ ಸೇವೆ ದೊರಕಬೇಕಾದ್ರೆ ಮೊದಲು ಪೊಲೀಸ್‌ ಹೆಲ್ಪ್‌ಲೈನ್‌ 112 ಗೆ ಕರೆ ಮಾಡಿ ದೂರು ನೀಡಿ. 112 ಗೆ ಕರೆ ಮಾಡಿದಾಗ ನಿಮ್ಮ ಕಾಲ್‌ ರೆಕಾರ್ಡ್‌ ಮೂಲಕ ಸಂಪೂರ್ಣ ದೂರನ್ನು ನಾವು ಅರಿಯಬಹುದು ಹಾಗೂ ಬಹುಬೇಗ ಸ್ಪಂದಿಸಬಹುದು. ನೀವು ಮಾಹಿತಿ ನೀಡಿದ ಮೇಲೆ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿ ಎಂದರು.