ಬಿಜೆಪಿ ಪಾಲಿಗೆ ಪ್ರಾಣ ಸಂಕಟವಾದ ಯತ್ನಾಳ್,ಬಿಜೆಪಿ ನಾಯಕತ್ವದಲ್ಲಿ ತಳಮಳ.!

ರಾಜ್ಯ

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲೇ ಕೂಡಲ ಸಂಗಮ ಪೀಠದ ಜಗದ್ಗುರು ನೇತೃತ್ವದಲ್ಲಿ ಮೀಸಲಾತಿಗೆ ಆಗ್ರಹಿಸಿ ಆರಂಭವಾದ ಪಂಚಮಸಾಲಿ ಸಮುದಾಯದ ಹೊರಾಟದ ಬಿಸಿ ಈಗ ಬಿಜೆಪಿ ಸರ್ಕಾರದ ಬುಡವನ್ನೇ ಸುಡುಲು ಆರಂಭಿಸಿದೆ. ಇದಕ್ಕೆ ಕಾರಣ ಹೋರಾಟದ ಮುಂಚೂಣಿ ನಾಯತ್ವ ವಹಿಸಿರುವುದು ಆಡಳಿತ ಪಕ್ಷದವರೇ ಆದ ಬಸವನಗೌಡ ಪಾಟೀಲ ಯತ್ನಾಳ್. ಮೀಸಲಾತಿ ಹೋರಾಟದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಮುಖಂಡರು ಇದ್ದರೂ ಯತ್ನಾಳ್ ಅವರೊಬ್ಬರೇ ಸರ್ಕಾರದ ,ಮುಖ್ಯಮಂತ್ರಿ ವಿರುದ್ಧ ಅಬ್ಬರಿಸುತ್ತಿದ್ದಾರೆ.ಮುಖ್ಯವಾಗಿ ಅವರ ಹೋರಾಟ ಮೀಸಲಾತಿ ಬೇಡಿಕೆಗಿಂತ ಹೆಚ್ಚಾಗಿ ಪಕ್ಷದೊಳಗಿನ ತಮ್ಮ ವಿರೋಧಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಮತ್ತು ಕೈಗಾರಿಕಾ ಖಾತೆ ಸಚಿವ ಮುರುಗೇಶ ನಿರಾಣಿಯವರನ್ನು ಗುರಿಯಾಗಿಸಿಕೊಂಡಿದೆ. ಹೀಗಾಗಿ ಹೋರಾಟ ಮೀಸಲಾತಿಗಾಗಿ ಆದರೂ ಅದರ ಘನ ಉದ್ದೇಶ ಬೇರೆ ಎಂಬುದು ಕಂಡು ಬರುತ್ತಿರುವ ಅಂಶ. ಬೆಳಗಾವಿಯ ಸುವರ್ಣದ ಸೌಧದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಗಾರರು ಭಾರೀ ಸಂಖ್ಯೆಯಲ್ಲಿ ಸೇರಿ ಬೃಹತ್ ಸಮಾವೇಶ ನಡೆಸಿ ಸರ್ಕಾರದ ವಿರುದ್ಧ ಯುದ್ಧಕ್ಕೆ ಕಹಳೆ ಊದಿದ್ದಾರೆ.

ಮೀಸಲಾತಿ ಈಗಿಂದೀಗಲೇ ಘೋಷಿಸದಿದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ಕೊಡುವ ಹಂತಕ್ಕೂ ಮುಟ್ಟಿದ್ದಾರೆ. ಇವೇ ಮಾತುಗಳನ್ನು ಯತ್ನಾಳ್ ಹೇಳುತ್ತಿರುವುದು ಇಲ್ಲಿ ಮುಖ್ಯವಾದ ಅಂಶ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಸವರಾಜ ಬೊಮ್ಮಾಯಿ ಬಿಜೆಪಿಯ ಕಡೇ ಮುಖ್ಯಮಂತ್ರಿಯಾಗಿರಬಹುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದು ಕಡೆ ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ತನ್ನ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದು ವಿವರವಾದ ಅಧ್ಯಯನ ಇನ್ನೂ ಸರ್ಕಾರದಿಂದ ಆಗಬೇಕಿದೆ. ಹೋರಾಟಗಾರರ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಒಂದು ವಾರದ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ಚಳವಳಿಯ ಕಾವು ತಣ್ಣಗಾಗ ಬಹುದಾದರೂ ಮುಂದೆ ಸರ್ಕಾರ ಕೈಗೊಳ್ಳುವ ತೀರ್ಮಾನದಲ್ಲಿ ಫಲಿತಾಂಶ ನಿಂತಿದೆ.

ಈಗಾಗಲೇ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಆರ್ಥಿಕವಾಗಿ ದುರ್ಬಲಾರದ ಸಮುದಾಯಗಳಿಗೆ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೂ ಪಾಲಿಸಬೇಕಾದ ಕಾನೂನಾತ್ಮಕ ಹೊಣೆಗಾರಿಕೆ ಅದರ ಮೇಲಿದೆ.

ಪಂಚಮಸಾಲಿ ಮೀಸಲಾತಿ ಬೇಡಿಕೆಯನ್ನು ಮುಖ್ಯಮಂತ್ರಿ ಹೇಗೆ ನಿಭಾಯಿಸುತ್ತಾರೆ ಎಂಬುದೇ ಈಗ ಯಕ್ಷ ಪ್ರಶ್ನೆ. ಸುಪ್ರೀಂಕೋರ್ಟಿನ ಹಿಂದಿನ ಅನೇಕ ತೀರ್ಪುಗಳಲ್ಲಿ ಮೀಸಲಾತಿಯ ಪ್ರಮಾಣ ಶೇ. 50 ನ್ನು ಮೀರುವಂತಿಲ್ಲ ಎಂದು ಹೇಳಿದೆ.. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ.

ಬಸವನ ಗೌಡ ಪಾಟೀಲ ಯತ್ನಾಳ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಪಕ್ಷದಲ್ಲೇ ಇರುವ ಹಿರಿಯ ನಾಯಕರೊಬ್ಬರ ವಿರೋಧ ಇದೆ ಎಂದೂ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರತ್ತ ಗುರಿ ಇಟ್ಟಿದ್ದಾರೆ. ಈ ಕುರಿತು ಸ್ಪಷ್ಟೀಕರಣ ನೀಡಿರುವ ಯಡಿಯೂರಪ್ಪ, ಪಂಚಮಸಾಲಿ ಸಮುದಾಯದ ಬೇಡಿಕೆ ನ್ಯಾಯಯುತವಾಗಿದ್ದು ಅದಕ್ಕೆ ತಮ್ಮದೇನೂ ವಿರೋಧ ಇಲ್ಲ ಎಂದಿದ್ದಾರೆ. ಮೀಸಲಾತಿ ವಿಚಾರವನ್ನು ಇಟ್ಟುಕೊಂಡು ಸರ್ಕಾರ, ಪಕ್ಷದ ಹಿರಿಯ ನಾಯಕರ ವಿರುದ್ಧ ಯತ್ನಾಳ್ ಗರ್ಜಿಸುತ್ತಿದ್ದರೂ ಪಕ್ಷದ ರಾಜ್ಯಾಧ್ಯಕ್ಷ ರಾಗಲೀ ಅಥವಾ ಕರ್ನಾಟಕದಲ್ಲಿ ಪಕ್ಷದ ಸಂಘಟನೆಯ ಉಸ್ತುವಾರಿ ಹೊತ್ತ ಹೈಕಮಾಂಡ್ ನ ಪ್ರತಿನಿಧಿಗಳಾಗಲೀ ಮಾತನಾಡುತ್ತಿಲ್ಲ.

ಇನ್ನೂ ಕುತೂಹಲಕಾರಿ ಸಂಗತಿ ಎಂದರೆ ಈ ಹೋರಾಟದಲ್ಲಿ ತೊಡಗಿಸಿ ಕೊಂಡಿರುವ ಕಾಂಗ್ರೆಸ್ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅಥವಾ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಬೇರೆ ಪಕ್ಷಗಳ ಮುಖಂಡರು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಬಹಿರಂಗ ಸಭೆಗಳಲ್ಲಿ ಬಸವನಗೌಡ ತಾನು ಮಂತ್ರಿ ಪದವಿ ಅಥವಾ ಇನ್ಯಾವುದೇ ಅಧಿಕಾರದ ಆಸೆಯಿಂದ ಹೋರಾಟ ಮಾಡುತ್ತಿಲ್ಲ ಸಮುದಾಯಕ್ಕೆ ಸೌಲಭ್ಯ ಸಿಗಲು ಚಳವಳಿಗೆ ಧುಮುಕಿದ್ದೇನೆ ಎನ್ನುತ್ತಿದ್ದಾರೆ. ಆದರೆ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರ ಮಾತು ಇದಕ್ಕಿಂತ ವಿಭಿನ್ನವಾಗಿದೆ. ಅಲ್ಲಿಗೆ ಈ ಹೋರಾಟದ ಹಿಂದೆ ಮೀಸಲಾತಿ ಪಡೆಯುವುದರ ಹೊರತಾಗಿಯೂ ಇನ್ನೊಂದು ಮುಖ್ಯ ಉದ್ದೇಶವಿದೆ. ಅದು ಎಂದರೆ ಅಧಿಕಾರ ಹಿಡಿಯುವುದು.
ಈ ಹೋರಾಟದ ಜತೆಗೆ ಯತ್ನಾಳ್ ಸರ್ಕಾರದ ಶೈಕ್ಷಣಿಕ ನೀತಿಯ ವಿರುದ್ಧವೂ ಸಿಡಿದೆದ್ದಿದಾರೆ.