ಶಿವಮೊಗ್ಗ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ,ವೈ.ಎಸ್.ವಿ ದತ್ತ

ರಾಜ್ಯ

ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಎಸ್ ತೊರೆಯಲು ಮುಂದಾಗಿರುವ ವೈ.ಎಸ್.ವಿ ದತ್ತ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಕುರಿತಂತೆ ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದ್ದು, ಯಡಿಯೂರಪ್ಪ, ಈಶ್ವರಪ್ಪ, ಡಿ.ಎಚ್.ಶಂಕರಮೂರ್ತಿ, ಆಯನೂರು ಮಂಜುನಾಥ್, ಅರಗ ಜ್ಞಾನೇಂದ್ರ ಸೇರಿದಂತೆ ಘಟಾನುಘಟಿ ನಾಯಕರುಗಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರನ್ನು ಈ ಬಾರಿ ಮಣಿಸಲೇಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಭಾರಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿಂದೆ ಅದೇ ಸಮುದಾಯದ ಕೆ.ಬಿ ಪ್ರಸನ್ನ ಕುಮಾರ್ ಈಶ್ವರಪ್ಪ ಅವರನ್ನು ಸೋಲಿಸಿದ್ದರು. ಈ ಮೊದಲು ಸಹ ಬ್ರಾಹ್ಮಣ ಸಮುದಾಯದವರೇ ಆದ ಕೆ.ಎಚ್. ಶ್ರೀನಿವಾಸ್ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.