ಜಲೀಲ್ ಹತ್ಯೆ: ಮುಖ್ಯ ಆರೋಪಿ ಶೈಲೇಶ್ ಯಾನೆ ಶೈಲು ಸೇರಿದಂತೆ ಮೂವರ ಬಂಧನ, ಚಾಲಕ ರವೂಫ್ ಹತ್ಯೆಯ ಆರೋಪಿಯ ಪುತ್ರ ಶಾಮೀಲು

ಕರಾವಳಿ

ಸುರತ್ಕಲ್ ಕಾಟಿಪಳ್ಳ 4ನೇ ಬ್ಲಾಕ್‌ನ ಪ್ಯಾನ್ಸಿ ಅಂಗಡಿ ಮಾಲಕ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಳ್ಳೊಬ್ಬ ಈ ಹಿಂದೆ ಕಾಟಿಪಳ್ಳದಲ್ಲಿ ನಡೆದ ಬಸ್ ಚಾಲಕ ರವೂಫ್ ಹತ್ಯೆ ಪ್ರಕರಣದ ಅರೋಪಿಯ ಮಗನಾಗಿದ್ದು, ಉಳಿದ ಅರೋಪಿಗಳು ಕುಖ್ಯಾತಿ ಪಡೆದ ತಂಡದ ಸದಸ್ಯರೆಂದು ತಿಳಿದು ಬಂದಿದೆ. ಅದರಲ್ಲಿ ಪ್ರಮುಖ ಆರೋಪಿ ಶೈಲು ಯಾನೆ ಶೈಲೇಶ್ ನನ್ನು ಕಾಪುವಿನ ಲಾಡ್ಜ್ ವೊಂದರಲ್ಲಿ ವಶಕ್ಕೆ ಪಡೆಯಲಾಗಿದೆ. ಈತ ಈ ಹಿಂದೆ ಹಲವು ಪ್ರಮುಖ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದು, ಕಾಟಿಪಳ್ಳದಲ್ಲಿ ನಡೆದಿದ್ದ ಪಿಂಕಿ ನವಾಝ್ ಹತ್ಯಾಯತ್ನದ ಪ್ರಮುಖ ಆರೋಪಿಯಾಗಿದ್ದಾನೆ. ಇನ್ನೊಬ್ಬಾತ ಸುಮಿತ್ ಕಾಂಚನ್ ಯಾನೆ ಮುನ್ನಾ ಎಂದು ಗುರುತಿಸಲಾಗಿದೆ.

ಪೊಲೀಸರು ಈ ಪ್ರಕರಣದಲ್ಲಿ ವಿಚಾರಣೆಗಾಗಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ ಕುತೂಹಲ ಮೂಡಿಸಿದೆ.

ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದು ಕಡೆಗೆ ಹೆಣ್ಣಿನ ಸಹವಾಸ, ಅನೈತಿಕ ಸಂಬಂಧ ಎಂಬ ಕತೆ ಕಟ್ಟಿ, ಸಮಾಜದಲ್ಲಿ ಒಡಕ್ಕನ್ನುಂಟು ಮಾಡುವ ಕೆಲಸ, ಕಾರ್ಯಗಳು ಒಂದು ವರ್ಗದಿಂದ ನಡೆಯತ್ತಿದೆ. ಈ ಜಿಲ್ಲೆಯಲ್ಲಿ ಕೋಮು ವಿಷ ಬೀಜ ಬಿತ್ತಿ, ಓಟು ಬ್ಯಾಂಕಿಗಾಗಿ ನಡೆಸುವ ರಾಜಕೀಯ ಷಡ್ಯಂತ್ರವಾಗಿದೆ. ಇದು ಈ ಜಿಲ್ಲೆಯ ದುರಂತ.

ಪ್ರಕರಣ ಸಂಬಂಧ ನಾವು ಇದೀಗ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ರವರು ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಹತ್ಯೆಯ ಹಿಂದಿನ ಕಾರಣಗಳಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಹೇಳಿದ್ದಾರೆ.

ಜಲೀಲ್ ಹತ್ಯೆ ಪ್ರಕರಣದಲ್ಲಿ ಇದೀಗ ಬಂಧಿತರಾಗಿರುವ ಹಂತಕರು ಸುರತ್ಕಲ್ ಆಸುಪಾಸಿನ ಕುಖ್ಯಾತ ಮತಾಂಧ ಕ್ರಿಮಿನಲ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡವರಾಗಿದ್ದು, ಕೆಲವು ತಿಂಗಳ ಹಿಂದೆ ನಡೆದ ಫಾಝಿಲ್ ಹತ್ಯೆಯ ಪ್ರಕರಣದಲ್ಲೂ ಇದೇ ಗ್ಯಾಂಗ್ ಕೈಯಾಡಿಸಿತ್ತು.

ಈ ಹಿಂದೆ ಇದೇ ಸ್ಥಳದಲ್ಲಿ ಚಾಲಕ ರವೂಫ್ ಎಂಬವರನ್ನು ಹತ್ಯೆಗೈಯ್ಯಲಾಗಿತ್ತು. ಚಾಲಕ ರವೂಫ್ ಹಂತಕನ ಪುತ್ರನೇ ಜಲೀಲ್ ಹತ್ಯೆಯಲ್ಲಿ ಶಾಮೀಲಾಗಿರುವುದು ದೃಢಪಟ್ಟಿದೆ. ಜಲೀಲ್ ಹಾಗೂ ರವೂಫ್ ಹತ್ಯೆಯಾದ ಸ್ಥಳ ಅಜುಬಾಜಿನಲ್ಲಿದೆ. ಅಂದು ರವೂಫ್ ನನ್ನು ಹತ್ಯೆಗೈದ ಹಂತಕನ ಪುತ್ರನೇ ಇಂದು ಜಲೀಲ್ ನನ್ನು ಹತ್ಯೆಗೈದ ಪ್ರಕರಣದಲ್ಲಿ ಶಾಮಿಲಾಗಿರುವುದು ದುರಂತ ಎಂದೇ ಹೇಳಬೇಕು.