ಪೊಲೀಸರು ಅನುಚಿತ ವರ್ತನೆ ತೋರಿದರೆ ಅಥವಾ ಪೊಲೀಸ್ ಸಿಬ್ಬಂದಿ ವಿರುದ್ಧ ನಿಮಗೆ ದೂರು ನೀಡ ಬೇಕಿದ್ದರೆ ಅದಕ್ಕೆ ಸೂಕ್ತ ವೇದಿಕೆಯನ್ನು ಪೊಲೀಸರೇ ನಿರ್ಮಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ಧ ದೂರಿ ನೀಡಲು QR ಕೋಡ್ ಅನ್ನು ಆರಂಭಿಸಲಾಗಿದೆ. ಇಂತಹ ವ್ಯವಸ್ಥೆ ಜಾರಿಗೆ ಬಂದಿರುವುದು ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳಲ್ಲಿ.
ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗುತ್ತಿದ್ದಂತೆ ಇದನ್ನು ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಿಸ್ತರಿಸಲು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪರೆಡ್ಡಿ ಮುಂದಾಗಿದ್ದಾರೆ.
ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಈ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿದ್ದು, ಇದನ್ನು ಬೆಂಗಳೂರು ಮಹಾನಗರದ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪರೆಡ್ಡಿ ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರಿನ ಆಗ್ನೇಯ ವಿಭಾಗದ 14 ಪೊಲೀಸ್ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು ,ಪೊಲೀಸರ ನಡವಳಿಕೆ ಮತ್ತು ಠಾಣೆಗಳ ವ್ಯವಸ್ಥೆಯ ಕುರಿತು ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ. ಕ್ಯೂ ಆರ್ ಕೋಡ್ ಎಲ್ಲಾ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದೆ. ತಮ್ಮ ಅಭಿಪ್ರಾಯ,ದೂರು ಮತ್ತು ಟಿಪ್ಪಣಿಯನ್ನು ಹಂಚಿಕೊಳ್ಳಬಹುದು.
ಎಲ್ಲೆಡೆ ಪೊಲೀಸರು ಹಾದಿ ತಪ್ಪುತ್ತಿದ್ದಾರೆ,ಅಕ್ರಮ ಎಸಗುತ್ತಿದ್ದಾರೆ, ಲಂಚ ಕೇಳುತ್ತಿದ್ದಾರೆ, ಸಂತ್ರಸ್ತರಿಗೆ ಸೂಕ್ತ ಪರಿಹಾರ, ನ್ಯಾಯ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಇದೀಗ ಪ್ರಮಾದ-ಲೋಪ ಎಸಗುವ ಪೊಲೀಸರ ವಿರುದ್ಧ ಸ್ಪಷ್ಟವಾದ ಮತ್ತು ನಿಖರವಾಗಿ ದೂರು ಸಲ್ಲಿಸಲು ಈ ಕ್ಯೂಆರ್ ಕೋಡ್ ಎಂಬ ವೇದಿಕೆ ಸಜ್ಜಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬ ಬೇಡಿಕೆಯು ಇದೀಗ ಕೇಳಿಬಂದಿದೆ.