ರಾಮಸೇತು ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ: ಸಂಸತ್ತಿನಲ್ಲಿ ಮೋದಿ ಸರ್ಕಾರದ ಹೇಳಿಕೆ

ರಾಷ್ಟ್ರೀಯ

ಭಾರತ ಮತ್ತು ಶ್ರೀಲಂಕಾ ನಡುವೆ ರಾಮಸೇತು ಇರುವುದರ ಕುರಿತು ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಮೋದಿ ಸರ್ಕಾರ ಸಂಸತ್ತಿನಲ್ಲಿ ಹೇಳಿದೆ. ಉಪಗ್ರಹ ಚಿತ್ರಗಳಲ್ಲಿ ದ್ವೀಪ-ಸುಣ್ಣದಕಲ್ಲುಗಳ ರಾಶಿ ಇರುವುದು ಕಂಡುಬರುತ್ತದೆ. ಆದರೆ ಇದು ಸೇತುವೆಯ ಅವಶೇಷಗಳು ಎಂದು ಹೇಳಲು ಸಾಧ್ಯವಿಲ್ಲ ಎಂದು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಗುರುವಾರ ರಾಮಸೇತು ಕುರಿತು ಬಿಜೆಪಿ ಸಂಸದ ಕಾರ್ತಿಕೇಯ ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ತಂತ್ರಜ್ಞಾನದ ಮೂಲಕ, ಉಪಗ್ರಹ ಚಿತ್ರಗಳ ಮೂಲಕ ಹಲವು ತುಂಡುಗಳು, ದ್ವೀಪ ಮತ್ತು ಒಂದು ರೀತಿಯ ಸುಣ್ಣದ ರಾಶಿಯನ್ನು ನಾವು ಸ್ವಲ್ಪ ಮಟ್ಟಿಗೆ ಗುರುತಿಸಲು ಸಾಧ್ಯವಾಯಿತು. ಇದು ಸೇತುವೆಯ ಭಾಗವೇ ಅಥವಾ ಅದರ ಅವಶೇಷಗಳು ಎಂದು ನಾವು ಹೇಳಲು ಸಾಧ್ಯವಿಲ್ಲ” ಎಂದು ಉತ್ತರಿಸಿದ್ದಾರೆ.

18 ಸಾವಿರ ವರ್ಷಗಳ ಇತಿಹಾಸದ ರಾಮ ಸೇತುವಿನ ಹುಡುಕಾಟದಲ್ಲಿ ಹಲವಾರು ಮಿತಿಗಳಿವೆ. ಉಪಗ್ರಹ ಚಿತ್ರಗಳನ್ನು ತೆಗೆಯಲಾಗಿದೆ. ಆಳವಿಲ್ಲದ ನೀರಿನಲ್ಲಿ ದ್ವೀಪ ಮತ್ತು ಸುಣ್ಣದ ಕಲ್ಲುಗಳು ಗೋಚರಿಸುತ್ತವೆ, ಆದರೆ ಇವು ರಾಮಸೇತುವಿನ ಅವಶೇಷಗಳು ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುಪಿಎ ಸರಕಾರ ಈ ಹಿಂದೆ ಪರಿಸರವಾದಿ ಆರ್.ಕೆ. ಪಚೌರಿ ನೇತೃತ್ವದಲ್ಲಿ ಸೇತು ಸಮುದ್ರಂ ಯೋಜನೆಗೆ ಪರ್ಯಾಯ ಜೋಡಣೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸಿತ್ತು. ದ್ವೀಪಗಳ ಸರಪಳಿಯ ಮೂಲಕ ನ್ಯಾವಿಗೇಷನಲ್ ಮಾರ್ಗ ರಚಿಸಲು 83 ಕಿಮೀ ಜಾಗದಲ್ಲಿ ಅಗೆಯಲು ಮುಂದಾಗಿತ್ತು. ಆದರೆ ಬಿಜೆಪಿಯು ಹಿಂದಿನಿಂದಲೂ ಅಲ್ಲಿ ಶ್ರೀರಾಮ ನಿರ್ಮಿಸಿದ್ದ ರಾಮ ಸೇತುವೆ ಇದೆ. ಅದು 48 ಕಿ.ಮೀ ಉದ್ದವಾಗಿದೆ ಎಂದು ಪ್ರತಿಪಾದಿಸಿತ್ತು. ಅದನ್ನೆ ಮುಂದು ಮಾಡಿ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು.

ಸದ್ಯ ಬಿಜೆಪಿ ಸರ್ಕಾರವೇ ಅದು ಸೇತುವೆಯಲ್ಲ ಎಂದು ಒಪ್ಪಿಕೊಂಡ ನಂತರ ಕಾಂಗ್ರೆಸ್ ವಕ್ತಾರ ಸರ್ಕಾರದ ಕುರಿತು ವ್ಯಂಗ್ಯವಾಡಿದ್ದಾರೆ. “ಎಲ್ಲಾ ಭಕ್ತರೇ, ತೆರೆದ ಕಿವಿಯಿಂದ ಆಲಿಸಿ ಮತ್ತು ತೆರೆದ ಕಣ್ಣುಗಳಿಂದ ನೋಡಿ.
ರಾಮಸೇತು ಇದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಮೋದಿ ಸರ್ಕಾರ ಸಂಸತ್ತಿನಲ್ಲಿ ಹೇಳುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.