ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ.!ಬರಿಗೈಲಿ ಬಂದ ಬೊಮ್ಮಾಯಿ. ಗ್ರೀನ್ ಸಿಗ್ನಲ್ ನೀಡದ ಹೈಕಮಾಂಡ್

ರಾಜ್ಯ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ ಹೊತ್ತು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿದರು. ಆದರೆ ವರಿಷ್ಠರ ಸಮ್ಮತಿ ದೊರೆಯದ ಕಾರಣ, ಸಂಪುಟ ವಿಸ್ತರಣೆ ಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಲ್. ಸಂತೋಷ್, ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಹಾಜರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಾಕಿ ಇರುವ ಕುರಿತು ಪಕ್ಷದ ನಾಯಕರಿಗೆ ವಿವರಿಸಿದ್ದೇನೆ.ಮಾಹಿತಿ ಪಡೆದುಕೊಂಡಿರುವ ವರಿಷ್ಠರು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಇದೇ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇವೆ. ವರಿಷ್ಠರು ಶೀಘ್ರ ನಿರ್ಧಾರ ಕೈಗೊಳ್ಳುವ ಭರವಸೆ ಇದೆ. ಈ ಬಗ್ಗೆ ನಾನು ಸಕಾರಾತ್ಮಕವಾಗಿದ್ದೇನೆ ಎಂದರು.

ಖಾಲಿ ಇರುವ ಸಂಪುಟದ ಐದು ಸ್ಥಾನಗಳಿಗೆ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ.ಹಾಗಾಗಿ, ಹೈಕಮಾಂಡ್‌ ಸಂಪುಟ ವಿಸ್ತರಣೆಗೆ ಅನುಮತಿ ನೀಡಲು ಒಲವು ತೋರುವ ಸಾಧ್ಯತೆ ಕಡಿಮೆ. ವಿಧಾನಸಭಾ ಚುನಾವಣೆಗೆ ಕೇವಲ 4 ತಿಂಗಳು ಬಾಕಿ ಇದ್ದು, ಸಂಪುಟ ವಿಸ್ತರಣೆ ಮೂಲಕ ಆಕಾಂಕ್ಷಿಗಳ ಬಂಡಾಯ ಎದುರಿಸಲು ಪಕ್ಷದ ನಾಯಕರು ಬಯಸುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.