ಯಡಿಯೂರಪ್ಪ ಬಳಿಕ
ಆರ್ ವಿ ದೇಶಪಾಂಡೆ ಗೆ ಒಲಿದ ಅತ್ಯುತ್ತಮ ಶಾಸಕ ಪ್ರಶಸ್ತಿ

ರಾಜ್ಯ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆಯವರಿಗೆ ನೀಡಲಾಯಿತು. ಕಳೆದ ಬಾರಿ ಈ ಪ್ರಶಸ್ತಿ ಶಿಕಾರಿಪುರ ಕ್ಷೇತ್ರದ ಶಾಸಕ ಬಿ ಎಸ್ ​ಯಡಿಯೂರಪ್ಪ ಅವರ ಮಡಿಲೇರಿತ್ತು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಶಾಸಕ ಆರ್.ವಿ.ದೇಶಪಾಂಡೆಗೆ ಇಂದು ಪ್ರಶಸ್ತಿ ಪ್ರದಾನ ಮಾಡಿದರು. 75 ವರ್ಷ ವಯಸ್ಸಿನ ಹಿರಿಯ ನಾಯಕ ದೇಶಪಾಂಡೆ ಅವರು ಇದುವರೆಗೂ 9 ಬಾರಿ ಅಸೆಂಬ್ಲಿ ಚುನಾವಣೆ ಎದುರಿಸಿದ್ದಾರೆ. ದೇಶಪಾಂಡೆ ಅವರು ಉತ್ತರ ಕನ್ನಡ ಜಿಲ್ಲೆಯ ತಮ್ಮ ಹುಟ್ಟೂರಾದ ಹಳಿಯಾಳ ಅಸೆಂಬ್ಲಿ ಕ್ಷೇತ್ರವನ್ನು ಕಾಂಗ್ರೆಸ್​ ವತಿಯಿಂದ ಪ್ರತಿನಿಧಿಸಿದ್ದಾರೆ.

1947 ಮಾರ್ಚ್​ 16ರಂದು ಜನಿಸಿದ ದೇಶಪಾಂಡೆ ಅವರು ಬಿಎ, ಎಲ್​ಎಲ್​ಬಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ ಅಂಕಿತರಾದ ದೇಶಪಾಂಡೆ ಅವರು ಜನತಾಪರಿವಾರದೊಂದಿಗೆ ವಿಧಾನಸಭೆ ಪ್ರವೇಶಿಸಿದರು. ಎಸ್​ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ದೀರ್ಘಾವಧಿಗೆ 13 ವರ್ಷ ಕಾಲ ಕೈಗಾರಿಕಾ ಸಚಿವರಾಗಿದ್ದರು. 10 ಜನ ಮುಖ್ಯಮಂತ್ರಿಗಳ ಜೊತೆ ಕಾರ್ಯನಿರ್ವಹಿಸಿದ ಹಿರಿಮೆ ಇವರದ್ದು. ಪ್ರತಿಪಕ್ಷದ ನಾಯಕರಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸದನದ ಚೌಕಟ್ಟು ಮೀರದಂತೆ ಮಾತನಾಡುವ ಅನುಭವ, ಜ್ಞಾನ ಅವರಿಗೆ ಇದೆ.