ಸುರತ್ಕಲ್ ಕಾಟಿಪಳ್ಳ 4 ನೇ ಬ್ಲಾಕಿನ ಫ್ಯಾನ್ಸಿ ಅಂಗಡಿ ಮಾಲೀಕ ಜಲೀಲ್ ಹತ್ಯೆಯಲ್ಲಿ ಈವರೆಗೆ ಮೂವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಬಂಧನ ಬಾಕಿ ಉಳಿದಿದೆ. ಇದರ ಜೊತೆಗೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳನ್ನು ಪೊಲೀಸರು ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಜಲೀಲ್ ಹತ್ಯೆಯಲ್ಲಿ ಆರೋಪಿಯಾಗಿರುವ ಸವಿನ್ ಕಾಂಚನ್ ಯಾನೆ ಮುನ್ನಾ ಮೂಲ್ಕಿ ನಿವಾಸಿಯಾಗಿದ್ದು, ಸುರತ್ಕಲ್, ಮೂಲ್ಕಿ, ಮೈಸೂರು, ಪಡುಬಿದ್ರೆ ಠಾಣೆಯಲ್ಲಿ ಹಲವಾರು ಕೇಸುಗಳಿವೆ. ಈತನ ಮೇಲೆ ರೌಡಿ ಶೀಟರ್ ತೆರೆಯಲಾಗಿದೆ.
ಸವಿನ್ ಕಾಂಚನ್ ಇನ್ ಸ್ಟ್ರಾಗಂ ಪೇಜಿನ ಪ್ರೊಫೈಲ್ ನಲ್ಲಿ ಕೇಸರಿ ಧಿರಿಸು ಧರಿಸಿದ ತಲ್ವಾರ್ ಪ್ರದರ್ಶಿಸುವ ಪೋಟೋ ಇದೀಗ ಸೋಷಿಯಲ್ ಮೀಡಿಯಾ ಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜಲೀಲ್ ಹತ್ಯೆಯ ಹಿಂದೆ ಅನೇಕ ಕಾರಣಗಳಿದ್ದರೂ, ಮತಾಂಧ ಶಕ್ತಿಗಳು ಇಂತಹ ಕ್ರಿಮಿನಲ್ ಗಳನ್ನು ಪೋಷಿಸಿ ಅವರ ಮೂಲಕ ಹತ್ಯೆಗೈದು ತಾವು ಸೇಫ್ ಝೋನ್ ನಲ್ಲಿ ಇರುವುದು ಇದೀಗ ಸಾಬೀತಾಗಿದೆ.
ಅನ್ಯ ಧರ್ಮೀಯರ ವಿರುದ್ಧ ನಾಯಕರೆನಿಸಿಕೊಂಡವರ ಉದ್ರೇಕಕಾರಿ ಭಾಷಣಗಳು ಇಂತಹ ಮತಾಂಧ ಕ್ರಿಮಿನಲ್ ಗಳ ತಲೆಗೆ ನುಗ್ಗಿಸಿ ತಮ್ಮ ಕಾರ್ಯ ಸಾಧಿಸುತ್ತಿರುವುದು ಇದೀಗ ಜಿಲ್ಲೆಯಲ್ಲಿ ಹೊಸ ಟ್ರೆಂಡ್ ಆಗಿ ಬಿಟ್ಟಿದೆ. ತಮಗಾಗದವರನ್ನು ಮತಾಂಧ ಸಂಘಟನೆಗಳು ಕ್ರಿಮಿನಲ್ ಗಳನ್ನು ಪೋಷಿಸಿ ಅವರ ಮೂಲಕ ಇಂತಹ ಹತ್ಯೆಗಳನ್ನು ನಡೆಸಿದರೆ, ಅದು ಕಮ್ಯುನಲ್ ಗಲಾಟೆಗೆ ಸಂಬಂಧಿಸಿದ್ದಲ್ಲ, ರೌಡಿಗಳ ಮುಖಾಂತರ ವೈಯುಕ್ತಿಕ ದ್ವೇಷಕ್ಕೆ ಸಂಬಂಧಿಸಿದ್ದು ಎಂಬ ಸಂದೇಶವನ್ನು ಜನಸಾಮಾನ್ಯರಲ್ಲಿ ಬಿತ್ತರಿಸುವಲ್ಲಿ ಮತಾಂಧ ಸಂಘಟನೆಗಳು ಯಶಸ್ವಿಯಾಗುತ್ತಿದೆ.
ನಾಯಕರ ಉದ್ರೇಕಕಾರಿ ಭಾಷಣದಿಂದ ದಾರಿ ತಪ್ಪಿದ ಕ್ರಿಮಿನಲ್ ಯುವಕರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಮತಾಂಧ ಸಂಘಟನೆಗಳು ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಜಲೀಲ್ ಹತ್ಯೆಯಲ್ಲಿ ಮತಾಂಧ ಸಂಘಟನೆಗಳು ಕ್ರಿಮಿನಲ್ ಹಿನ್ನೆಲೆಯ ಯುವಕರನ್ನು ಬಳಸಿಕೊಂಡು ತಮ್ಮ ಕಾರ್ಯ ಸಾಧಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿಂದೆ ರೌಡಿ ಶೀಟರ್ ಗಳು ಕಮ್ಯುನಲ್ ಹಿನ್ನೆಲೆಯ ಹತ್ಯೆಗಳಲ್ಲಿ ಭಾಗಿಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರೌಡಿ ಶೀಟರ್ ಗಳನ್ನು ಮತಾಂಧ ಶಕ್ತಿಗಳು ಬಳಸಿಕೊಳ್ಳುತ್ತಿರುವುದು ದೃಢಪಟ್ಟಿದೆ. ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಅಮಾಯಕ ಬಷೀರ್ ಹತ್ಯೆಯಲ್ಲೂ ಕ್ರಿಮಿನಲ್ ಹಿನ್ನೆಲೆಯ ಯುವಕರನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಜಲೀಲ್ ಹತ್ಯೆಯಲ್ಲೂ ಮತಾಂಧ ಶಕ್ತಿಗಳು ಕ್ರಿಮಿನಲ್ ಹಿನ್ನೆಲೆಯ ಯುವಕರನ್ನೇ ಬಳಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಕೇವಲ ಆರೋಪಿಗಳನ್ನು ಬಂಧಿಸಿದರೆ ಮಾತ್ರ ಸಾಲದು. ಕ್ರಿಮಿನಲ್ ಗಳನ್ನು ಪೋಷಿಸುತ್ತಿರುವವರಿಗೆ ಬಿಸಿ ಮುಟ್ಟಿಸಿದರೆ ಮಾತ್ರ ಇನ್ನಷ್ಟು ಹತ್ಯೆಗಳನ್ನು ತಡೆಯಬಹುದು.