ನೌಶಾದ್ ಹಾಜಿ ಕಾರು ಚಾಲಕ ಮುಶರ್ರಫ್ ಉಳಾಯಿಬೆಟ್ಟು ಮರಣವನ್ನು ಸಮುದಾಯ ಮರೆತಿತೇ.?

ಕರಾವಳಿ

SPECIAL EXCLUSIVE

ಮೊಹಿದ್ದೀನ್ ಬಾವಾ ಬಿಟ್ಟು ಸಮುದಾಯದ ಬೇರೆ ಯಾವುದೇ ನಾಯಕರು ಭೇಟಿ ಕೊಟ್ಟು ಸಾಂತ್ವನ ಹೇಳಲಿಲ್ಲ.

ಕುಟುಂಬದ ಆಧಾರ ಸ್ತಂಭ ಮಗನನ್ನು ಕಳೆದುಕೊಂಡ ಕಣ್ಣೀರ ಕಥೆ

ಅದೊಂದು ಪುಟ್ಟ ಗ್ರಾಮೀಣ ಪ್ರದೇಶ. ಮಂಗಳೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ ಆ ಮನೆ. ನಿನ್ನೆಯಷ್ಟೇ ವೇಣೂರು ಬಳಿ ಅಪಘಾತಕ್ಕೀಡಾಗಿ ಮೃತಪಟ್ಟ ನೌಶಾದ್ ಹಾಜಿ ಕಾರು ಚಾಲಕ ಮುಶರ್ರಫ್ ಉಳಾಯಿಬೆಟ್ಟು ಕುಟುಂಬದ ಕಣ್ಣೀರ ಕಥೆಯಿದು. ನಿನ್ನೇ ಇಡೀ ಜಿಲ್ಲೆಯೇ ಶೋಕಸಾಗರದಲ್ಲಿ ಮುಳುಗಿತ್ತು. ನೌಶಾದ್ ಹಾಜಿ ಅಂತಿಮ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಆದರೆ ಅಲ್ಲಿಯೇ ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ಉಳಾಯಿಬೆಟ್ಟು ವಿನಲ್ಲಿ ನೌಶಾದ್ ಹಾಜಿ ಕಾರು ಚಾಲಕ ಮುಶರ್ರಫ್ ಅಂತಿಮ ದರ್ಶನಕ್ಕೆ ಬೆರೆಳೆಣಿಕೆಯ ಜನರಷ್ಟೇ ಸೇರಿದ್ದರು. ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಹೊರತುಪಡಿಸಿ ಬೇರೆ ಯಾವುದೇ ಸಮುದಾಯದ ನಾಯಕರು, ಉಲೆಮಾಗಳು ಮುಶರ್ರಫ್ ಮನೆಯತ್ತ ಕಣ್ಣಾಡಿಸಲೇ ಇಲ್ಲ. ಸಮುದಾಯವೇ ಮುಶರ್ರಫ್ ಮರಣವನ್ನು ಮರೆತುಬಿಟ್ಟಿತಾ.?

ಕೂಲಿ ಕೆಲಸ ಮಾಡಿಕೊಂಡಿರುವ ತಂದೆ ಸಯ್ಯದ್ ರಿಗೆ ಇಬ್ಬರು ಮಕ್ಕಳು. ಅದರಲ್ಲಿ ದೊಡ್ಡವನು ನಿನ್ನೆಯಷ್ಟೇ ಮರಣ ಹೊಂದಿದ 21 ರ ಹರೆಯದ ಮುಶರ್ರಫ್. ಮತ್ತೊಬ್ಬಳು 14 ರ ಹರೆಯದ ಹೆಣ್ಣು ಮಗಳು. ಮನೆಗೆ ಆಧಾರ ಸ್ತಂಭ ವಾಗಿದ್ದ ಮುಶರ್ರಫ್ ಮರಣದಿಂದ ಇಡೀ ಕುಟುಂಬವೇ ಕಣ್ಣೀರಲ್ಲಿ ಮುಳುಗಿದೆ.

ಇರುವುದಕ್ಕೊಂದು ಜೋಪಡಿ ರೀತಿಯ ಮನೆ. ಅದು ಕೂಡ ಸ್ವಂತದ್ದಲ್ಲ. ಬಾಡಿಗೆ ಮನೆ. ಮುಶರ್ರಫ್ ಅಲ್ಪ ಸ್ವಲ್ಪ ಕೆಲಸ ಮಾಡಿ ತಂದ ಹಣದಿಂದಲೇ ಕುಟುಂಬದ ಜೀವನ ಸಾಗಿಸುತ್ತಿತ್ತು. ಮುಶರ್ರಫ್ ಇದೀಗ ನಮ್ಮಿಂದ ಅಗಲಿದ್ದಾನೆ. ಇನ್ನು ನಮಗೆ ಯಾರು ಗತಿ.? ತಂದೆ ಸಯ್ಯದ್ ರ ಗದ್ಗದಿತ ಮಾತು ಕೇಳುವಾಗ ಯಾರ ಮನಸ್ಸು ಕರಗದೇ ಇರದು.

ಮುಶರ್ರಫ್ ಕಳೆದ 5 ತಿಂಗಳಿದೀಚೆ ನೌಶಾದ್ ಹಾಜಿಯ ಕಾರು ಚಾಲಕರಾಗಿ ದುಡಿಯುತ್ತಿದ್ದ. ಮುಶರ್ರಫ್ ಬಗ್ಗೆ ಇಡೀ ಊರೇ ಒಳ್ಳೆಯ ಮಾತು ಆಡುತ್ತಿದೆ. ಇಷ್ಟರವರೆಗೆ ಯಾರ ಮನಸ್ಸು ನೋಯಿಸಿದ ಹುಡುಗನಲ್ಲ. ಉಲೇಮಾಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಹುಡುಗ. ಮರಣದ ಮುಂಚಿನ ರಾತ್ರಿ ಬೈಕಂಪಾಡಿ ಅಡ್ಕ ಊರೂಸಿಗೆ ಹೋಗಿ ಬಂದು ಮಲಗಿದ್ದವ ಬೆಳಿಗ್ಗೆ 7.30 ಕ್ಕೆ ಸೂರಲ್ಪಾಡಿಗೆ ತೆರಳಿದ್ದ. 8.15 ಕ್ಕೆ ನೌಶಾದ್ ಹಾಜಿ ಯೊಂದಿಗೆ ಮುಶರ್ರಫ್ ಅಪಘಾತದಲ್ಲಿ ಮರಣಹೊಂದಿದ್ದ.

ಮುಶರ್ರಫ್ ತಂಗಿ 8ನೇ ತರಗತಿ ಓದುತ್ತಿದ್ದಾಳೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಂತೂ ಚಿಂತಾಜನಕ. ಮನೆಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ. ದಿಕ್ಕು ತೋಚದೇ ಕುಳಿತಿದೆ. ಸ್ವಂತ ಮನೆಯಿಲ್ಲದೇ ಜೋಪಡಿಯಂತಹ ಬಾಡಿಗೆ ಮನೆಯಲ್ಲಿ ಭವಿಷ್ಯದ ಬಗ್ಗೆ ಯೋಚಿಸುತ್ತಾ ಕಣ್ಣೀರು ಹಾಕುತ್ತಿದೆ. ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ರಾತ್ರೋರಾತ್ರಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ನೌಶಾದ್ ಹಾಜಿ ಅಂತಿಮ ದರ್ಶನದಲ್ಲಿ ಭಾಗವಹಿಸಿದ ಬೇರೆ ಯಾವುದೇ ಸಮುದಾಯದ ನಾಯಕರು, ಉಲೇಮಾಗಳು ಇತ್ತ ಕಣ್ಣು ಹಾಯಿಸಲೇ ಇಲ್ಲ. ಮುಶರ್ರಫ್ ರದ್ದು ಕೂಡ ಒಂದು ಜೀವ. ಅವರಿಗೂ ಕುಟುಂಬವಿದೆ. ಬೆಳೆದು ನಿಂತಿದ್ದ ಮಗನ ಅನಿರೀಕ್ಷಿತ ಮರಣವನ್ನು ಕಣ್ಣಾರೆ ಕಾಣುವ ದೌರ್ಭಾಗ್ಯ ಆತನ ತಂದೆ, ತಾಯಿಗೆ ದೊರಕಿದೆ. ಇನ್ನಾದರೂ ಸಮುದಾಯದ ನಾಯಕರು ಇತ್ತ ಗಮನ ಹರಿಸಬೇಕಿದೆ. ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಮುಶರ್ರಫ್ ಕುಟುಂಬದ ಜೊತೆಗೆ ನಿಂತು ಸಮುದಾಯ ಪ್ರೇಮ ತೋರಿಸಬೇಕಿದೆ.