ಉತ್ತರಾಖಂಡ್ ಹೈಕೋರ್ಟ್‌ ಆದೇಶದಿಂದ ಬೀದಿಗೆ ಬೀಳಲಿವೆ ನಾಲ್ಕು ಸಾವಿರಕ್ಕೂ ಹೆಚ್ಚು ಕುಟುಂಬಗಳು.!

ರಾಷ್ಟ್ರೀಯ

ಹೈಕೋರ್ಟ್‌ನ ಆದೇಶದಿಂದ 4,365 ಕುಟುಂಬಗಳ ಮೇಲೆ ಪರಿಣಾಮ.
ಆದೇಶದ ವಿರುದ್ಧ ಬೀದಿಗಿಳಿದ ಕುಟುಂಬಗಳಿಂದ ಪ್ರತಿಭಟನೆ.

ಹಲ್ದ್ವಾನಿ ರೈಲು ನಿಲ್ದಾಣದ ಪಕ್ಕದ ‘ಗಫೂರ್ ಬಸ್ತಿ’ಯಲ್ಲಿ ನಿವಾಸಿಗಳು ರೈಲ್ವೆಗೆ ಸೇರಿದ 78 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಅಲ್ಲಿಂದ ತೆರವುಗೊಳಿಸುವಂತೆ ಉತ್ತರಾಖಂಡ್ ಹೈಕೋರ್ಟ್‌ನ ಆದೇಶಿಸಿದೆ. ಹೈಕೋರ್ಟ್‌ನ ಈ ಆದೇಶದಿಂದ ಸುಮಾರು 4,365 ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದ್ದು, ಇದರ ವಿರುದ್ಧ ಸಾವಿರಾರು ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ.

‘ಗಫೂರ್ ಬಸ್ತಿ’ ಎಂದು ಕರೆಯಲ್ಪಡುವ ಹಲ್ದ್ವಾನಿ ರೈಲು ನಿಲ್ದಾಣದ ಪಕ್ಕದ ರೈಲ್ವೆ ಭೂಮಿಯ ಪಕ್ಕದಲ್ಲಿರುವವರು ಅನಧಿಕೃತವಾಗಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ವಾರದೊಳಗೆ ತೆರವುಗೊಳಿಸುವಂತೆ ಉತ್ತರಾಖಂಡ್ ಹೈಕೋರ್ಟ್ ಕಳೆದ ವಾರ ಆದೇಶಿಸಿತ್ತು. ಅಲ್ಲದೇ, ಬನ್‌ಭೂಲ್‌ಪುರದಲ್ಲಿ ರೈಲ್ವೆ ಭೂಮಿ ಮೇಲೆ ಅತಿಕ್ರಮಣವಾಗಿ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ಕೆಡವುವಂತೆ ಆದೇಶ ನೀಡಿತ್ತು.

ನ್ಯಾಯಮೂರ್ತಿಗಳಾದ ಶರದ್ ಶರ್ಮಾ ಮತ್ತು ಆರ್‌ಸಿ ಖುಲ್ಬೆ ಅವರ ವಿಭಾಗೀಯ ಪೀಠವು ಅಲ್ಲಿರುವವರಿಗೆ ಒಂದು ವಾರಗಳ ಕಾಲದ ನೋಟಿಸ್ ನೀಡಿ, ನಂತರ ನೆಲಸಮಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.78 ಎಕರೆ ರೈಲ್ವೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ 4,365 ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಬಂಭೂಲ್ಪುರದಲ್ಲಿರುವ ಈ ವಿವಾದಿತ ಭೂಮಿಯಲ್ಲಿ ಶಾಲೆ, ವ್ಯಾಪಾರ ಸಂಸ್ಥೆ. ಮಸೀದಿ ಮತ್ತು ನೂರಾರು ಮನೆಗಳಿವೆ. ಹೈಕೋರ್ಟ್‌ನ ಈ ಆದೇಶವು 4,365 ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ. ಇದರಲ್ಲಿ ಬಹುತೇಕ ನಿವಾಸಿಗಳು ಮುಸ್ಲಿಮರೇ ಇದ್ದಾರೆ ಎಂದು ವರದಿಯಾಗಿದೆ. ಮುಸ್ಲಿಂ ಕುಟುಂಬಗಳ ಸಹಿತ ಸುಮಾರು 20 ರಿಂದ 25 ಸಾವಿರ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಹೈಕೋರ್ಟ್‌ ತನ್ನ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.

ಈ ಪ್ರಕರಣದ ವಿಚಾರಣೆ ವೇಳೆ ನಿವಾಸಿಗಳ ಪರವಾಗಿ ವಾದ ಕೇಳಿಲ್ಲ. ಹಾಗಾಗಿ ತಮಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಪಿಪಿಎಸಿಟಿ ಅಡಿಯಲ್ಲಿ ಎಲ್ಲ ಕುಟುಂಬಗಳಿಗೆ ರೈಲ್ವೆ ನೋಟಿಸ್ ನೀಡಿದೆ ಎಂದು ರೈಲ್ವೆ ವಾದಿಸಿದಾಗ, ಈ ಭೂಮಿ ರಾಜ್ಯ ಸರ್ಕಾರಕ್ಕೆ ಸೇರಿದ್ದಲ್ಲ, ರೈಲ್ವೆ ಒಡೆತನದಲ್ಲಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಈ ನಡುವೆ ಉತ್ತರಾಖಂಡದ ಆಲ್ ಇಂಡಿಯಾ ಮಜ್ಲಿಸ್-ಎ-ಇತಿಹಾದ್ ಉಲ್ ಮುಸ್ಲಿಮೀನ್ (ಎಐಎಂಐಎಂ) ನ ರಾಜ್ಯಾಧ್ಯಕ್ಷ ಡಾ. ನಯ್ಯರ್ ಕಾಝ್ಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮ್ ಅವರಿಗೆ ಪತ್ರ ಬರೆದಿದ್ದಾರೆ. 4,500 ಕ್ಕೂ ಹೆಚ್ಚು ಕುಟುಂಬಗಳು ಏಳು ದಶಕಗಳಿಗೂ ಹೆಚ್ಚು ಕಾಲ ಇಲ್ಲಿ ವಾಸಿಸುತ್ತಿವೆ. ವಿದ್ಯುತ್ ಸಂಪರ್ಕ, ಮನೆ ತೆರಿಗೆ, ಜಲ ಸಂಪರ್ಕಗಳು ಮತ್ತು ಇತರೆ ದಾಖಲೆಗಳು ಇಲ್ಲಿನ ನಿವಾಸಿಗಳು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ, ಈ ಸಮಸ್ಯೆಯನ್ನು ಪರಿಹರಿಸಲು ಕೋರಿದ್ದಾರೆ.

ಮುಸ್ಲಿಂ ಕುಟುಂಬಗಳ ವಿರುದ್ಧ 2016ರಲ್ಲಿ ಆರ್‌ಎಸ್‌ಎಸ್‌ನ ರವಿಶಂಕರ್ ಜೋಶಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು ಎಂದು ವರದಿಯೊಂದು ತಿಳಿಸಿದೆ.