ಮುಸ್ಲಿಂ ವಲಯದಲ್ಲಿ ಸಂಚಲನ ಮೂಡಿಸಿದ ವರದಿ.. ಮುಶರ್ರಫ್ ಕುಟುಂಬಕ್ಕೆ ಕೈ ಜೋಡಿಸಿದ ಸಮುದಾಯದ ಮುಖಂಡರು.!

ಕರಾವಳಿ

SPECIAL NEWS BIG IMPACT

ರಂಗಕ್ಕಿಳಿದ ಮುಸ್ಲಿಂ ಸೆಂಟ್ರಲ್ ಕಮಿಟಿ..ಆಧಾರ ಸ್ತಂಭ ಕಳೆದುಕೊಂಡ ಕುಟುಂಬಕ್ಕೆ ಆಸರೆಯ ಭರವಸೆ.

ನಿನ್ನೆ ಸ್ಪೆಷಲ್ ನ್ಯೂಸ್ ಮೀಡಿಯಾ ಕಾರು ಅಪಘಾತದಲ್ಲಿ ಮೃತಪಟ್ಟ ಚಾಲಕ ಮುಶರ್ರಫ್ ಉಳಾಯಿಬೆಟ್ಟು ಕುಟುಂಬದ ದಯನೀಯ ಪರಿಸ್ಥಿತಿ ಬಗ್ಗೆ ಸಮಗ್ರ ವರದಿಯನ್ನು ಬಿಚ್ಚಿಟ್ಟಿತು. ಸಮುದಾಯ ಮುಶರ್ರಫ್ ರನ್ನು ಮರೆತಿತೇ ಹೆಡ್ ಲೈನ್ ನೊಂದಿಗೆ ವರದಿಯನ್ನು ಪ್ರಕಟಿಸಿತ್ತು. ಮುಶರ್ರಫ್ ಕುಟುಂಬದ ಬಗ್ಗೆ ಸಮುದಾಯದ ನಾಯಕರು ನಿರ್ಲಕ್ಷ್ಯ ತೋರಿಸುತ್ತಿದ್ದರಾ? ಅನ್ನುವ ಬಗೆಗಿನ ವರದಿಯಾಗಿತ್ತು. ಈ ವರದಿ ಮುಸ್ಲಿಂ ಸಮುದಾಯದೊಳಗೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಪರ- ವಿರೋಧ ಅಭಿಪ್ರಾಯಗಳು ಕೇಳಿ ಬಂದಿತ್ತು. ನಮ್ಮದು ಆಧಾರ ಸ್ತಂಭ ಕಳೆದುಕೊಂಡ ಕುಟುಂಬಕ್ಕೆ ಧ್ವನಿಯಾಗಿ ನಿಲ್ಲುವ ಉದ್ದೇಶದೊಂದಿಗೆ ಈ ವರದಿಯನ್ನು ಪ್ರಕಟಿಸಿದ್ದೆವು. ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಕುಟುಂಬದೊಂದಿಗೆ ಹಾಗೂ ಉಳಾಯಿಬೆಟ್ಟು ಪರಿಸರದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು,ಜಿಲ್ಲೆಯ ಎಸ್.ಡಿ.ಪಿ.ಐ ಮುಖಂಡರು ಹಾಗೂ ಸಮುದಾಯದ ಕೆಲವು ಪ್ರಮುಖ ಉಲೆಮಾ ನಾಯಕರು ಮುಶರ್ರಫ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಆದರೆ ಇನ್ನು ಕೆಲವು ಸಮುದಾಯದ ರಾಜಕೀಯ ಪ್ರಮುಖ ಮುಖಂಡರು ಅತ್ತ ಕಡೆ ತಲೆಯಾಡಿಸಲೇ ಇಲ್ಲ. ಈ ಬಗ್ಗೆ ಗ್ರೌಂಡ್ ರೀಪೋರ್ಟ್ ಮಾಡಿತ್ತು. ಆ ನಂತರ ಎಚ್ಚೆತ್ತ ಕೆಲವು ರಾಜಕೀಯ ನಾಯಕರು ತಂಡೋಪತಂಡವಾಗಿ ಕುಟುಂಬವನ್ನು ಭೇಟಿ ಮಾಡಿ ನಿಮ್ಮ ದು:ಖದೊಂದಿಗೆ ನಾವಿದ್ದೇವೆ ಅನ್ನುವ ಸಂದೇಶ ಮತ್ತು ದೈರ್ಯವನ್ನು ನೀಡಿದ್ದಾರೆ. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ,ಕೊಡುಗೈದಾನಿ ಇನಾಯತ್ ಅಲಿ ಮೂಲ್ಕಿಯವರು ನಿನ್ನೆ ಸಂಜೆ ಮುಶರ್ರಫ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ,ಕುಟುಂಬಕ್ಕೆ ಆರ್ಥಿಕ ಸಹಾಯದ ಭರವಸೆಯನ್ನು ನೀಡಿದ್ದಾರೆ.

Sdpi ನಾಯಕರು ಬೇಟಿ

ಇತ್ತ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಊರಿನ ಪ್ರಮುಖರೊಂದಿಗೆ ಚರ್ಚಿಸಿ ನೇರವಾಗಿ ನಿಯೋಗವನ್ನು ಮಂಗಳೂರಿಗೆ ಕರೆಯಿಸಿ ಶಾಸಕರಾದ ಯು.ಟಿ.ಖಾದರ್ ಜೊತೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖಂಡರನ್ನು ಭೇಟಿ ಮಾಡಿ ಕುಟುಂಬದ ದಯನೀಯ ಪರಿಸ್ಥಿತಿ ಬಗ್ಗೆ ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ ಮಸೂದ್ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಸ್ಪೆಷಲ್ ನ್ಯೂಸ್ ಮೀಡಿಯಾ ವರದಿಯ ಬಗ್ಗೆ ಚರ್ಚೆ ಕೂಡ ನಡೆದಿದೆ. ಕೂಡಲೇ ರಂಗಕ್ಕಿಳಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಮುಶರ್ರಫ್ ಕುಟುಂಬದ ಪರಿಸ್ಥಿತಿ ಬಗ್ಗೆ ಅವಲೋಕಿಸಿ ನೆರವು ನೀಡುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದಾರೆ.(ದಿನಾಂಕ 7 ರಂದು ಸೆಂಟ್ರಲ್ ಕಮಿಟಿಯಲ್ಲಿ ಈ ಬಗ್ಗೆ ಮೀಟಿಂಗ್ ನಡೆಯಲಿದೆ.)

ಇನಾಯತ್ ಅಲಿ ಬೇಟಿ

ಇಂದು ಕೂಡ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದ್ದು ಮೊನ್ನೆ ದುಷ್ಕರ್ಮಿಗಳಿಂದ ಹತ್ಯೆಯಾದ ಜಲೀಲ್ ಹಾಗೂ ಅಪಘಾತದಿಂದ ಮೃತಪಟ್ಟ ಮುಶರ್ರಫ್ ಉಳಾಯಿಬೆಟ್ಟು ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಅಂತಿಮ ಚರ್ಚೆ ನಡೆಯಲಿದೆ ಅನ್ನುವ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಮುಶರ್ರಫ್ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ತೀರ್ಮಾನ ಮಾಡಿದ್ದು ಅಧಿಕೃತವಾಗಿ ಘೋಷಣೆ ಮಾಡುವುದಷ್ಟೇ ಬಾಕಿ ಇದೆ.

ಕೆಲವು ತಿಂಗಳ ಹಿಂದೆ ಜಿಲ್ಲೆಯಲ್ಲಿ ಮತಾಂಧರಿಂದ ಕೊಲೆಗೈಯಲ್ಪಟ್ಟ ಮಸೂದ್-ಫಾಝೀಲ್ ಕುಟುಂಬಕ್ಕೆ ಸರ್ಕಾರ ನೆರವು ನೀಡಲು ಹಿಂದೇಟು ಹಾಕಿದಾಗ ಮುಸ್ಲಿಂ ಸೆಂಟ್ರಲ್ ಕಮಿಟಿ ಸಮುದಾಯದ ನಾಯಕತ್ವ ವಹಿಸಿ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಮುಹಮ್ಮದ್ ಮಸೂದ್ ನಾಯಕತ್ವಕ್ಕೆ ಸಮುದಾಯ ಸಂಪೂರ್ಣ ಬೆಂಬಲ ನೀಡಿತ್ತು. ಇದೀಗ ಆಧಾರ ಸ್ತಂಭ ಕಳೆದುಕೊಂಡ, ಸ್ವಂತ ಸೂರಿಲ್ಲದೇ ಇರುವ ಮುಶರ್ರಫ್ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಅಭಿನಂದನೀಯ. ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಮತ್ತು ಯು.ಟಿ ಖಾದರ್ ರವರ ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲೇಬೇಕಿದೆ.

ಈ ಮಧ್ಯೆ ವರದಿ ಪ್ರಸಾರವಾದ ಬಳಿಕ ಮುಶರ್ರಫ್ ತಂಗಿಯ ವಿಧ್ಯಾಭ್ಯಾಸದ ಜವಾಬ್ದಾರಿಯನ್ನು ಸ್ಥಳೀಯ ಮಲ್ಲೂರು ಟುಡೇ ಮಿಡಿಯಾ ಸೆಂಟರ್ ಶೈಕ್ಷಣಿಕ ಸಂಸ್ಥೆಯೊಂದು ವಹಿಸಿದ್ದು, ಪ್ರಸ್ತುತ ವಿದೇಶದಲ್ಲಿರುವ ಮಲ್ಲೂರು ಉದ್ದಬೆಟ್ಟುವಿನ ಶಿಕ್ಷಿತ ಕುಟುಂಬವೊಂದು ಸಂಸ್ಥೆಯ ಜೊತೆ ಬೆನ್ನೆಲುಬಾಗಿ ನಿಂತು ವಿದ್ಯಾಭ್ಯಾಸದ ಎಲ್ಲಾ ಜವಾಬ್ದಾರಿಯನ್ನು ವಹಿಸುವ ಭರವಸೆಯನ್ನು ನೀಡಿರುತ್ತದೆ.

ಇತ್ತ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿರವರು ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸಹಾಯ,ಸೌಲಭ್ಯಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಸಮುದಾಯದ ನಾಯಕರು, ಉಲಮಾಗಳು,ರಾಜಕೀಯ ಮುಖಂಡರು,ಸಂಸ್ಥೆಗಳು ಬಡ ಕುಟುಂಬದ ಕಣ್ಣೀರು ಒರೆಸಲು ಮುಂದಾಗಿರುವುದು ಸಂತೋಷದಾಯಕ.ನಮ್ಮ ವರದಿ ಸಾರ್ಥಕತೆ ತಂದದಕ್ಕೆ ನಮಗೂ ಕೂಡ ಆತ್ಮ ತೃಪ್ತಿಯಿದೆ. ಕಣ್ಣೀರಲ್ಲಿ ಕಳೆಯುತ್ತಿರುವ ಕುಟುಂಬದ ಮುಖದಲ್ಲಿ ಮಂದಹಾಸ ಬೀರುವಂತಾಗಲಿ. ಸಮುದಾಯದ ನಾಯಕರು ಶ್ರೀಘ್ರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಿ ಎಂಬುದೇ ನಮ್ಮ ಕಳಕಳಿಯ ಹಾರೈಕೆ. ನೌಶಾದ್ ಹಾಜಿ ಸೂರಲ್ಪಾಡಿ ಹಾಗೂ ಚಾಲಕ ಮುಶರ್ರಫ್ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಸರ್ವಶಕ್ತನಾದ ಅಲ್ಲಾಹನು ಕರುಣಿಸಲಿ.ಎರಡೂ ಕುಟುಂಬದಲ್ಲೂ ಶಾಂತಿ,ಸಮಾಧಾನ ನೆಲೆನಿಲ್ಲಲಿ ಎಂದು ನಾವುಗಳು ಹಾರೈಸೋಣ.