ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ ಪ್ರಕರಣ.ಕಾಲೇಜು ವಿರುದ್ದ ಕೇಸು ದಾಖಲು.

ಕರಾವಳಿ

ಬೆಂಗಳೂರು ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಿನ್ನೆ ನಡೆದ ವಿದ್ಯಾರ್ಥಿನಿ ಲಯಸ್ಮಿತ ಕೊಲೆ ಪ್ರಕರಣ ಸಂಬಂಧ ಕೊಲೆ ಆರೋಪಿ ಪವನ್ ಕಲ್ಯಾಣ್ ಹಾಗೂ ಪ್ರೆಸಿಡೆನ್ಸಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಆರೋಪಿ ಪವನ್ ಆತ್ಮಹತ್ಯಗೆ ಯತ್ನಿಸಿ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತಳ ತಾಯಿ ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಾಗಿದೆ. ದೂರಲ್ಲಿ ಆರೋಪಿ ಪವನ್ ಹೆಸರು ಉಲ್ಲೇಖವಾಗಿದೆ. ಇನ್ನೂ, ಪ್ರೆಸಿಡೆನ್ಸಿ ಕಾಲೇಜ್ ಭದ್ರತಾ ವೈಫಲ್ಯ ಪ್ರಶ್ನಿಸದೇ ಇತರರು ಎಂದು ನಮೂದಿಸಲಾಗಿದೆ.

ವಿದ್ಯಾರ್ಥಿನಿ ಲಯಸ್ಮಿತಳ ಮರಣೋತ್ತರ ಪರೀಕ್ಷೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ‌ ನಡೆಸಿ,ಬಳಿಕ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉತ್ತಮ ವಿದ್ಯಾಭ್ಯಾಸಕ್ಕೆ ಸೇರಿಸಿದ್ದೇವು. ಆದರೆ, ಇಲ್ಲಿ ವಿದ್ಯಾಭ್ಯಾಸಕ್ಕಿಂತ ಬೇರೆಲ್ಲಾ ಕೆಲಸ ನಡೆಯುತ್ತದೆ. ಇದಕ್ಕೆ ಲಯ ಕೊಲೆಯೇ ಸಾಕ್ಷಿ. ಕಾಲೇಜಿಗೆ ಮಕ್ಕಳನ್ನು ನೋಡಲು ಪೋಷಕರನ್ನು ಬಿಡಲ್ಲ. ಆದರೆ, ಚಾಕು ಹಿಡಿದ ಯುವಕನನ್ನು ಹೇಗೆ ಬಿಟ್ಟರು? ಎಂದು ಪೋಷಕರು ದೂರಿದ್ದಾರೆ.ಹೀಗಾಗಿ ಕಾಲೇಜು ಹಾಗೂ ಸೆಕ್ಯುರಿಟಿ ಏಜೆನ್ಸಿ ವಿರುದ್ದ ದೂರು ದಾಖಲಾಗಿದೆ.

ಘಟನೆ ನಡೆದು 24 ಗಂಟೆ ಕಳೆದರೂ ಪೊಲೀಸರು ಕಾಲೇಜ್ ಆಡಳಿತ ಮಂಡಳಿಯವರನ್ನು ಕರೆದು ಭದ್ರತೆ ಬಗ್ಗೆ ವಿಚಾರಣೆ ಮಾಡಿಲ್ಲ. ಕೇಳಿದ್ರೆ ಎಫ್ಐಆರ್ ಮಾಡಿದ್ದೇವೆ. ಕಾಲೇಜಿನವರು ಯಾರು ಸಿಗುತ್ತಿಲ್ಲ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಆರೋಪಿ ಪವನ್ ಚೇತರಿಸಿಕೊಂಡ ಬಳಿಕ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸುತ್ತಾರೆ. ಅದಾದ ಬಳಿಕ ವಿದ್ಯಾರ್ಥಿನಿ ಲಯಸ್ಮಿತಳ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ರಾಜಾನುಕುಂಟೆ ಪೊಲೀಸರು ಪ್ರೆಸಿಡೆನ್ಸಿ ಕಾಲೇಜ್ ವಿರುದ್ಧ ಸಾಫ್ಟ್ ಕಾರ್ನರ್ ಆಗಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ.