ಅಯೋಧ್ಯೆಯ ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ, ತ್ರಿವಳಿ ತಲಾಖ್ ಮತ್ತು ನೋಟ್ ಬ್ಯಾನ್ ಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದವರಲ್ಲಿ ಒಬ್ಬರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಜ. 4 ರಂದು ನಿವೃತ್ತರಾದರು.ಅಯೋಧ್ಯೆ ವಿವಾದದ ತೀರ್ಪು ಪಂಚ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಂ ನ್ಯಾಯಮೂರ್ತಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯ ಕಾನದ. ದಿ. ಫಕೀರ ಸಾಹೇಬ್ ಹಾಗೂ ದಿ. ಹಮೀದಾಬಿ ದಂಪತಿಯ ಪುತ್ರರಾಗಿರುವ ಅಬ್ದುಲ್ ನಜೀರ್ ಜ. 5, 1958ರಲ್ಲಿ ಹುಟ್ಟಿದ ನಜೀರ್ ರವರು ಬೆಳುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಆ ಬಳಿಕ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.ಬಳಿಕ 1983 ರಲ್ಲಿ ಬೆಂಗಳೂರಿನ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡತೊಡಗಿದರು. ತದ ನಂತರ ಮೇ 2003 ರಲ್ಲಿ, ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ,ಬಳಿಕ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.ಫೆಬ್ರವರಿ 2017 ರಲ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ, ನಜೀರ್ ಅವರು ಭಾರತದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು. ವಿಶೇಷ ಎಂದರೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗದೇ ಉನ್ನತೀಕರಿಸಲ್ಪಟ್ಟ ಮೂರನೇ ನ್ಯಾಯಾಧೀಶರಲ್ಲಿ ನಜೀರ್ ಒಬ್ಬರಾಗಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ, 2017ರಲ್ಲಿ ವಿವಾದಾತ್ಮಕ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ಬಹು-ಧರ್ಮೀಯ ಪೀಠದಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದರು
ಅಯೋಧ್ಯೆ ವಿವಾದದ ಐತಿಹಾಸಿಕ 2019 ರ ಸುಪ್ರೀಂ ಕೋರ್ಟ್ ಪಂಚಪೀಠವೂ ಅಬ್ದುಲ್ ನಜೀರ್ ಭಾಗವಾಗಿದ್ದರು. ಸಿಜೆಐ ರಂಜನ್ ಗೋಗೊಯಿ, ಜಸ್ಟೀಸ್ ಎಸ್ ಎ ಬೋಬ್ಡೆ, ಜಸ್ಟೀಸ್ ಡಿವೈ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಝೀರ್ ಸದಸ್ಯರನ್ನು ಒಳಗೊಂಡಿತ್ತು .ಇದರಲ್ಲಿ ಅವರು ವಿವಾದಿತ ಪ್ರದೇಶದಲ್ಲಿ ಹಿಂದೂ ರಚನೆಯ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ ASI ವರದಿಯನ್ನು ಎತ್ತಿಹಿಡಿದು ರಾಮಮಂದಿರದ ಪರವಾಗಿ ತೀರ್ಪು ನೀಡಿದ್ದರು.
ನಿವೃತ್ತಿಯ 2 ದಿನದ ಹಿಂದೆಯಷ್ಟೇ , ನಜೀರ್ ಅವರು ಭಾರತ ಸರ್ಕಾರದ 2016 ರ ಭಾರತೀಯ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡಿದ್ದರು.ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದು, ಕರಾವಳಿಗೆ ಬಂದಾಗಲೆಲ್ಲಾ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಕನ್ನಡ, ತುಳು ಭಾಷೆಯಲ್ಲೇ ಭಾಷಣ ಮಾಡುವುದು ಅವರ ವಿಶೇಷತೆಯಾಗಿತ್ತು.