ಸ್ಯಾಂಟ್ರೋ ರವಿಯ ಎಲ್ಲಾ ಪ್ರಕರಣಗಳು ತನಿಖೆಗೆ.ಪ್ರತಿ ಪಕ್ಷದವರಿದೂ ಆಪ್ತನಾಗಿದ್ದ: ಬೊಮ್ಮಾಯಿ

ರಾಜ್ಯ

ಸ್ಯಾಂಟ್ರೋ ರವಿ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳು, ಆತನ ದಂಧೆಯ ಎಲ್ಲಾ ಅಂಶಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿಯ 20 ವರ್ಷಗಳ ದಂಧೆಯ ಎಲ್ಲಾ ಪ್ರಕರಣಗಳನ್ನು ತನಿಖೆಗೆ ಒಳಪಡಿಸುತ್ತೇವೆ. ಆತ 20 ವರ್ಷದಲ್ಲಿ ಯಾರ ಯಾರ ಸಂಪರ್ಕದಲ್ಲಿದ್ದ, ಆತನ ವ್ಯವಹಾರ ಏನು ಎಂಬುದು ತನಿಖೆ ಮೂಲಕ ಬಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿಪಕ್ಷಗಳ ನಾಯಕರ ಜೊತೆಯಲ್ಲೂ ಸ್ಯಾಂಟ್ರೋ ರವಿ ಸಂಪರ್ಕದಲ್ಲಿದ್ದಾನೆ, ಈಗ ಬಿಡುಗಡೆಯಾಗುತ್ತಿರುವ ಫೋಟೋ ಮತ್ತು ಕಾಲ್ ಲಿಸ್ಟ್​​ಗಳು ಎಲ್ಲವೂ ನಕಲಿಯಾಗಿದೆ. ಅದು ಅವನೇ ತಾಂತ್ರಿಕತೆಯಿಂದ ಮಾಡಿಕೊಂಡಿರುವುದಾಗಿದೆ ಎಂದು ಹೇಳಿದ್ದಾರೆ.

ಯಾರ ಜೊತೆ ಏನೋ ಮಾತನಾಡುತ್ತೇವೆ, ಮಾತನಾಡಿದ ತಕ್ಷಣ ಅಪರಾಧಿಯಾಗುತ್ತಿವಾ? ಯಾರು ಯಾರ ಜೊತೆ ಮಾತನಾಡುವಾಗ ಎಲ್ಲಾ ಹಿನ್ನೆಲೆ ನೋಡಿ ಮಾತನಾಡಲು ಸಾಧ್ಯನಾ? ಪ್ರತಿಪಕ್ಷಗಳು ಸುಮ್ಮನೇ ಆರೋಪಗಳನ್ನ ಮಾಡುತ್ತಿವೆ ಎಂದರು.

ನಾನು ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಈ ವಿಚಾರದಲ್ಲಿ ಪ್ರಶ್ನೆ ಕೇಳುವವರೆಲ್ಲಾ ತನಿಖಾಧಿಕಾರಿಗಳು ಆಗುವುದು ಬೇಡ. ಇಲ್ಲಿ ಯಾರು ತನಿಖಾಧಿಕಾರಿಗಳು ಅಲ್ಲ. ಪೊಲೀಸರು ಇಲ್ಲಿ ನಿಜವಾದ ತನಿಖೆ ಮಾಡುತ್ತಾರೆ‌. ಇಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.