ಕ್ವಾರಿ ಮಾಲೀಕರ ಮುಷ್ಕರ: 1.7 ಸಾವಿರ ಕೋಟಿ ರೂ. ಮೌಲ್ಯದ ಮೂಲ ಸೌಕರ್ಯ ಕಾಮಗಾರಿಗೆ ಹೊಡೆತ!

ರಾಜ್ಯ

ಬೆಂಗಳೂರು: ಕ್ವಾರಿ ಮತ್ತು ಕಲ್ಲು ಪುಡಿ ಮಾಡುವ ಘಟಕಗಳ ಮಾಲೀಕರ ಮುಷ್ಕರರಿಂದಾಗಿ ಬೆಂಗಳೂರಿನಲ್ಲಿ ಸುಮಾರು 1,749 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹೊಡೆತ ಬಿದ್ದಿದೆ.
477 ಕಿ.ಮೀ ರಸ್ತೆಗಳ ಡಾಂಬರೀಕರಣ, ಕೆಳ ಸೇತುವೆ, ಮೇಲ್ಸೇತುವೆ, ಜಂಕ್ಷನ್ ಸುಧಾರಣೆ ಮತ್ತು ಜೆಲ್ಲಿ ಕಲ್ಲುಗಳು ಮತ್ತು ಕಾಂಕ್ರೀಟ್ ಅಗತ್ಯವಿರುವ ಇತರ ಯೋಜನೆಗಳು ಮುಷ್ಕರ ಪ್ರಾರಂಭವಾದ ಡಿಸೆಂಬರ್ 22 ರಿಂದ ಸಾಮಗ್ರಿಗಳನ್ನು ಸರಬರಾಜು ಮಾಡದ ಕಾರಣ ಸ್ಥಗಿತಗೊಂಡಿವೆ.

ಬಿಬಿಎಂಪಿ ಇಂಜಿನಿಯರ್ ಮುಖ್ಯಸ್ಥ ಬಿ.ಎಸ್. ಪ್ರಹ್ಲಾದ್ ಮಾತನಾಡಿ, ಹತ್ತು ದಿನಗಳ ಹಿಂದೆ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರಿಂದ 19.5 ಕೋಟಿ ರೂ.ವೆಚ್ಚದ ಎಚ್‌ಎಎಲ್ ಅಂಡರ್ ಪಾಸ್ ಹಾಗೂ 60 ಕೋಟಿ ರೂ.ಗಳ ಸುಜಾತಾ ಚಿತ್ರಮಂದಿರದ ಬಳಿಯ ವೈ ಜಂಕ್ಷನ್ ಸುಧಾರಣೆ ಕಾಮಗಾರಿಯನ್ನು ಜನವರಿ 15ರೊಳಗೆ ಪೂರ್ಣಗೊಳಿಸಲು ಪಾಲಿಕೆ ಉದ್ದೇಶಿಸಿದೆ. ಆದರೆ ಮುಷ್ಕರ ನಡೆಯುತ್ತಿರುವುದರಿಂದ ಸಂಕ್ರಾಂತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ದಿನ ವಿಳಂಬವಾಗ ಬಹುದು ಎಂದಿದ್ದಾರೆ.

ಬಿಬಿಎಂಪಿ ನಗರೋತ್ಥಾನ ಅನುದಾನದಲ್ಲಿ 1,500 ಕೋಟಿ ರೂ.ಗಳಲ್ಲಿ ರಸ್ತೆಗಳ ಡಾಂಬರೀಕರಣ ಮತ್ತು ಮಳೆ ನೀರು ಚರಂಡಿಗಳ ದುರಸ್ತಿಗೆ ಚಾಲನೆ ನೀಡಲಾಗಿದೆ. ಆದರೆ, ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳ್ಳದಿರ ಬಹುದು ಎಂದರು. ರಸ್ತೆ ಡಾಂಬರೀಕರಣ ಕಾಮಗಾರಿ ಕುರಿತು ಬಿಬಿಎಂಪಿ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಆದರೆ, ಇಲ್ಲಿಯವರೆಗೆ ನಾವು ಕೇವಲ 60 ಕಿ.ಮೀ. ದೂರದ ಅಬಿವೃದ್ಧಿ ಸಾಧ್ಯವಾಗಿದೆ ಎಂದು ತಿಳಿಸಿದೆ.

ಮುಂದಿನ ದಿನಗಳಲ್ಲಿ ಮುಂಗಾರು ಆರಂಭಗೊಳ್ಳುವ ಸೂಚನೆಗಳಿದ್ದು, ಮುಷ್ಕರ ಮುಗಿದ ಕೂಡಲೇ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಬಿಬಿಎಂಪಿಯು ಯಲಹಂಕದಲ್ಲಿ 170 ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ ಆರಂಭಿಸಿದ್ದು, ಶೇ 25ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಪ್ರಮುಖ ರಸ್ತೆಗಳ ಕಾರ್ಯಪಾಲಕ ಎಂಜಿನಿಯರ್ ನಂದೀಶ್ ಮಾತನಾಡಿ, ‘ವೈ ಜಂಕ್ಷನ್ ಸುಧಾರಣೆ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸುಗಮಗೊಳಿಸಬಹುದು. ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆ ಬದಿಯಿಂದ ಮಲ್ಲೇಶ್ವರಕ್ಕೆ ಪ್ರವೇಶಿಸುವ ವಾಹನಗಳ ಸಂಚಾರ ತೀವ್ರವಾಗಿ ಕಡಿಮೆಯಾಗುತ್ತದೆ. ಇದರ ಪರಿಣಾಮವನ್ನು ಮೆಜೆಸ್ಟಿಕ್‌ನಲ್ಲಿಯೂ ಕಾಣಬಹುದು ಎಂದು ತಿಳಿಸಿದರು.

ಸಂಕ್ರಾಂತಿಗೆ ಎಚ್‌ಎಎಲ್‌-ಸುರಂಜನದಾಸ್‌ ರಸ್ತೆ ಅಂಡರ್‌ಪಾಸ್‌ ಯೋಜನೆ ಉದ್ಘಾಟನೆಗೆ ಅಣಿಯಾಗಿದ್ದು, ಈಗ ಮುಷ್ಕರದಿಂದಾಗಿ ಒಂದೇ ಒಂದು ಕ್ಯೂಬಿಕ್‌ ಮೀಟರ್‌ ಕಾಂಕ್ರೀಟ್‌ ಲಭ್ಯವಾಗದೆ ಅಂಡರ್‌ಪಾಸ್‌ ತೆರೆಯುವುದು ವಿಳಂಬವಾಗಲಿದೆ ಎಂದು ಬಿಬಿಎಂಪಿ ಪ್ರಾಜೆಕ್ಟ್‌ಗಳ ಮುಖ್ಯ ಎಂಜಿನಿಯರ್‌ ವಿನಾಯಕ ಸೂಗೂರು ಹೇಳಿದರು.