ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಗರಿಗೆದರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಯಾರು ಅಭ್ಯರ್ಥಿಯಾಗುತ್ತಾರೆ ಅನ್ನುವ ಲೆಕ್ಕಾಚಾರ ಪ್ರಾರಂಭವಾಗಿದೆ. ಈ ನಡುವಲ್ಲೇ ಕಾಂಗ್ರೆಸ್ ಪಕ್ಷ ಹೊಸ ತಂತ್ರವೊಂದನ್ನು ಹೆಣೆದಿದೆ.
ಬಿಲ್ಲವ, ಬಂಟ ಹಾಗೂ ಮುಸ್ಲೀಂ ಸಮಯದಾಯಕ್ಕೆ ಎರಡೆರಡು ಕ್ಷೇತ್ರ ಹಾಗೂ ಕ್ರಿಶ್ಚಿಯನ್ ಹಾಗೂ ಎಸ್.ಸಿ. ಸಮುದಾಯಕ್ಕೆ ತಲಾ ಒಂದೊಂದು ಕ್ಷೇತ್ರವನ್ನು ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.
ಜಿಲ್ಲೆಯಲ್ಲಿ ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಕರಾವಳಿ ಭಾಗದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನು ಕಂಡಿದ್ದವರಿಗೆ ಟಿಕೆಟ್ ನೀಡದೇ ಇರಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಪ್ರಭಾವಿ ಮುಖಂಡರಿಗೆ,ಹಿರಿತಲೆಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.ಜೊತೆಗೆ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವ ಸಮುದಾಯವನ್ನು ತನ್ನ ತೆಕ್ಕೆಗೆ ಸೆಳೆಯುವ ತಂತ್ರವನ್ನು ರೂಪಿಸಲು ಕಾಂಗ್ರೆಸ್ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ತಂತ್ರಕ್ಕೆ ಮುಂದಾಗಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಯು.ಟಿ.ಖಾದರ್ ಅವರಿಗೆ ಟಿಕೆಟ್ ಖಚಿತವಾಗಿದೆ. ಜೊತೆಗೆ ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯತ್ ಆಲಿ ಹೆಸರು ಮುಂಚೂಣಿಯಲ್ಲಿದ್ದು ಖಚಿತವೆಂಬಂತೆ ಕ್ಷೇತ್ರಾದ್ಯಂತ ಮಿಂಚಿನ ಸಂಚಾರದಲ್ಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಅಭ್ಯರ್ಥಿಗಳ ಪಾಲಾಗುವ ಸಾಧ್ಯತೆಯಿದ್ದು, ಹೊಸ ಮುಖದ ಆಧಾರದ ಮೇಲೆ ಐವನ್ ಡಿಸೋಜಾ ಹೆಸರು ಮಂಚೂಣಿಯಲ್ಲಿದೆ. ಅದೇ ರೀತಿ ಜೆ ಆರ್ ಲೋಬೋ ಹೆಸರು ಕೇಳಿ ಬರುತ್ತಿದೆ. ಮಂಗಳೂರು ದಕ್ಷಿಣ ಕ್ರಿಶ್ಚಿಯನ್ಯರಿಗೆ ಖಚಿತ ಆಗಿದ್ದು ಯಾವುದೇ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಈ ಬಾರಿಯೂ ಬಿಲ್ಲವ ಸಮುದಾಯದ ಅಭ್ಯರ್ಥಿಗಳೇ ಕಣಕ್ಕೆ ಇಳಿಯಲಿದ್ದಾರೆ. ಹೊಸಮುಖವಾದರೆ ರಕ್ಷಿತ್ ಶಿವರಾಂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೈಕಮಾಂಡ್ ಮೂಲಗಳಿಂದ ವರದಿಯಾಗಿದೆ. ಸುಳ್ಯ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನು ಪುತ್ತೂರು ಕ್ಷೇತ್ರದಲ್ಲಿ ಕಳೆದ ಬಾರಿ ಬಂಟ ಸಮುದಾಯದ ಶಕುಂತಲಾ ಶೆಟ್ಟಿ ಅವರು ಸ್ಪರ್ಧಿಸಿದ್ದು, ಈ ಬಾರಿಯೂ ಬಂಟ ಸಮುದಾಯದ ಅಶೋಕ್ ಕುಮಾರ್ ರೈ ಹೊಸ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ಬಂಟ್ವಾಳ ಹಾಗೂ ಮೂಡಬಿದಿರೆ ಕ್ಷೇತ್ರದಲ್ಲಿ ಬಂಟ ಹಾಗೂ ಬಿಲ್ಲವರ ನಡುವೆ ಪೈಪೋಟಿ ಏರ್ಪಟ್ಟಿದೆ. ಸದ್ಯ ಈ ಎರಡೂ ಕ್ಷೇತ್ರದಲ್ಲಿ ಬಂಟ ಸಮುದಾಯದ ಯುವ ಮುಖಂಡ ಮಿಥುನ್ ರೈ ಹಾಗೂ ರಮಾನಾಥ ರೈ,ಬಿಲ್ಲವ ಸಮುದಾಯದಿಂದ ಪದ್ಮರಾಜ್ ಹಾಗೂ ರಾಜಶೇಖರ ಕೋಟ್ಯಾನ್, ಪ್ರತಿಭಾ ಕುಳಾಯಿ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದೊಮ್ಮೆ ಮೂಡಬಿದ್ರೆ ಕ್ಷೇತ್ರದಿಂದ ಶಿವಕುಮಾರ್ ಶಿಷ್ಯ ಮಿಥುನ್ ರೈ ಕಣಕ್ಕೆ ಇಳಿದ್ರೆ ಅತೀ ಹೆಚ್ಚು ಬಿಲ್ಲವ ಮತದಾರರನ್ನು ಹೊಂದಿರುವ ಬಂಟ್ವಾಳ ಕ್ಷೇತ್ರವನ್ನು ಬಿಲ್ಲವ ಸಮುದಾಯಕ್ಕೆ ಬಿಟ್ಟುಕೊಡಬೇಕಾಗಿದೆ. ಇಲ್ಲಿ ಪದ್ಮರಾಜ್ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಡುವೆ ಮಿಥುನ್ ರೈ ಹಾಗೂ ರಮನಾಥ ರೈ ಈ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದೆ.ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮಿಥುನ್ ರೈ ಹಾಗೂ ರಮಾನಾಥ ರೈ ಪೈಕಿ ಒಬ್ಬರಿಗೆ ಟಿಕೆಟ್ ಕೈತಪ್ಪುವುದಂತು ಬಹುತೇಕ ಖಚಿತ.
ಮೂಡಬಿದ್ರಿ ಮತ್ತು ಬಂಟ್ವಾಳ ಕ್ಷೇತ್ರ ಕತೆ ನಿಗೂಢವಾಗಿದ್ದು, ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವ ಸ್ಥಿತಿಗೆ ಬಂದು ಮುಟ್ಟಿದೆ. ಹೊಸ ಸೂತ್ರದಿಂದ ಹಲವು ಅಭ್ಯರ್ಥಿಗಳಲ್ಲಿ ಆತಂಕವನ್ನು ಮೂಡಿಸಿದ್ದು ಏನು ಬೇಕಾದರೂ ಆಗಬಹುದು ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಕಾಂಗ್ರೆಸ್ ಇಡೀ ಜಿಲ್ಲೆಯ ಮತದಾರರ ಒಲವಿನ ಬಗ್ಗೆ ಸತತ ಸಮೀಕ್ಷೆಗಳನ್ನು ನಡೆಸಿದ್ದು ,ಈ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಮಾಜಿ ಸಚಿವ ಅಭಯ ಚಂದ್ರ ಜೈನ್ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸುತ್ತಾ ಬಂದಿದ್ದಾರೆ. ಕರಾವಳಿಯ ಈ ಕಾಂಗ್ರೆಸ್ ನ ಹೊಸ ಸೂತ್ರಕ್ಕೆ ಬಿಜೆಪಿ ಸ್ವಲ್ಪಮಟ್ಟಿಗೆ ತಲೆಕೆಡಿಸಿಕೊಂಡಿದೆ ಎಂದು ಬಿಜೆಪಿ ಮೂಲಗಳಿಂದ ವರದಿಯಾಗಿದೆ.