ಹಾಶಿನ್ ಮೃತಪಟ್ಟ ಘಟನೆ ಮಾಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ ಜಯಂತ್

ರಾಜ್ಯ

ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಸಾಲು ಸಾಲು ಮಕ್ಕಳು

ಕೋವಿಡ್ ಲಸಿಕೆ ಕಾರಣವಾಯಿತೇ..?

ಬಹುಶಃ ಕಳೆದ ಮೂರು ತಿಂಗಳ ಅಂತರದಲ್ಲಿ ರಾಜ್ಯದಲ್ಲಿ ಹತ್ತಕ್ಕಿಂತ ಅಧಿಕ ವಿದ್ಯಾರ್ಥಿಗಳು ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೃಷ್ಣಾಪುರದ ನಿವಾಸಿ 9ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಹಾಶಿನ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದ.

ಈ ಘಟನೆ ಮಾಸುವ ಮುನ್ನವೇ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಜಯಂತ್ ರಜತಾದ್ರಯ್ಯ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಆನವಟ್ಟಿ ಜೂನಿಯರ್ ಕಾಲೇಜು ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಜಯಂತ್ ಬೆಳಿಗ್ಗೆ ಶಾಲೆಗೆ ಹೊರಡಲು ಸಿದ್ಧವಾದಾಗ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾನೆ.

ಇದಕ್ಕೂ ಮೊದಲು ಮಡಿಕೇರಿಯ ಕುಡುಮಗಳೂರಿನ ಕೀರ್ತನ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದ. 12 ವರ್ಷ ಪ್ರಾಯದ ಆರನೇ ತರಗತಿ ವಿದ್ಯಾರ್ಥಿಯಾಗಿದ್ದ.

ಮೂಡಿಗೆರೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ, ಸುಳ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೋಕ್ಷಿತ್, ಬೆಳ್ತಂಗಡಿ ನೆರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಚಿನ್ ಹೀಗೆ ಸಾಲು ಸಾಲು ವಿದ್ಯಾರ್ಥಿಗಳು ಹೃದಯಾಘಾತಕ್ಕೆ ತುತ್ತಾಗಿ ಬಲಿಯಾಗುತ್ತಿರುವುದು ಆತಂಕ ತಂದಿದೆ.

ಯಾವುದೇ ರೋಗ ಇಲ್ಲದೆ ಸಹಜವಾಗಿಯೇ ಇರುತ್ತಿದ್ದ ವಿದ್ಯಾರ್ಥಿಗಳು ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಮೃತಪಟ್ಟಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಕೋವಿಡ್ ಕಾರಣಕ್ಕೆ ಹಾಕಿಸಿಕೊಂಡ ಲಸಿಕೆಯ ಪರಿಣಾಮದಿಂದ ಇದು ಸಂಭವಿಸುತ್ತಿದೆಯಾ ಅನ್ನುವುದು ಬಹು ಚರ್ಚಿತವಾಗಿದೆ. ಕೋವಿಡ್ ಲಸಿಕೆ ಕಡ್ಡಾಯಗೊಳಿಸಿದ್ದ ಸರಕಾರ ಲಸಿಕೆ ನೀಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ ಕೈ ಚೆಲ್ಲಿ ಕುಳಿತಿದೆ. ಮೆದುಳು ಜ್ವರಕ್ಕೆ ನೀಡುವ ಮಾತ್ರೆ ಅಥವಾ ಯುವ ಜನಾಂಗ ಫಾಸ್ಟ್ ಫುಡ್ ಸಂಸ್ಕೃತಿಗೆ ಮಾರುಹೋಗಿರುವುದು ಹೃದಯಾಘಾತಕ್ಕೆ ಕಾರಣವಾ ಅನ್ನುವ ಅಂಶ ದೃಢಪಟ್ಟಿಲ್ಲ. ಆದರೆ ಬಾಳಿ ಬದುಕಬೇಕಾದ ಎಳೆ ಜೀವಗಳು ದುರಂತ ಅಂತ್ಯ ಕಾಣುತ್ತಿರುವುದು ಮಾತ್ರ ಸತ್ಯ.