ಮಂಗಳೂರು: ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ

ಕರಾವಳಿ

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ದಿನೇ ದಿನೇ ಸ್ಕಿಲ್ ಗೇಮ್, ವಿಡಿಯೋ ಗೇಮ್, ಜುಗಾರಿ ಅಡ್ಡೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ. ರಿಕ್ರಿಯೇಶನ್ ಕ್ಲಬ್ ನ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿಪಡೆಯುತ್ತಿದೆ. ನಗರದ ಸಣ್ಣ ವ್ಯಾಪಾರಿಗಳು , ಕಾರ್ಮಿಕರು ,ವಿದ್ಯಾರ್ಥಿಗಳನ್ನು ಒಳಗೊಂಡಂತೆ ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರನ್ನು ಈ ಅಡ್ಡೆ ಗುರಿಯಾಗಿಸಿ ಜನರ ದುಡಿಮೆಯ ಹಣವನ್ನು ದೋಚುವ ಕಾರ್ಯದಲ್ಲಿ ತೊಡಗಿದೆ. ಈ ಮೋಸದಾಟಕ್ಕೆ ಸಿಲುಕಿದ ಬಹಳಷ್ಟು ಕುಟುಂಬಗಳು ತಮ್ಮ ಮನೆ, ಮಠ ಅಮೂಲ್ಯ ಸೊತ್ತುಗಳನ್ನು ಕಳಕೊಂಡು ಬೀದಿಗೆ ಬಿದ್ದಿವೆ. ಇಂತಹ ಅಕ್ರಮ ಜೂಜು ಕೇಂದ್ರಗಳ ವಿರುದ್ಧ ಸಾರ್ವಜನಿಕರು ಬಹಳಷ್ಟು ವಿರೋಧ ವ್ಯಕ್ತಪಡಿಸಿದರೂ ಸ್ಥಳೀಯ ಠಾಣೆಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬರೀ ತೋರಿಕೆಗಷ್ಟೆ ಬಂದ್ ಮಾಡುವ ನಾಟಕ ಮಾಡಿ ಮತ್ತೆ ಕೆಲದಿನದ ನಂತರ ಯಥಾ ಸ್ಥಿತಿಯಾಗಿ ಜೂಜು ಕೇಂದ್ರಗಳು ಕಾರ್ಯಾಚರಿಸುತ್ತವೆ.

ಈ ಹಿನ್ನೆಲೆಯಲ್ಲಿ ಜುಗಾರಿ ಅಡ್ಡೆ, ವಿಡಿಯೋ ಗೇಮ್, ಸ್ಕಿಲ್ ಗೇಮ್ ಗಳಂತಹ ಜೂಜುಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಒತ್ತಾಯಿಸಿ 11-01-23 ರಂದು ಡಿವೈಎಫ್ಐ ಕಾರ್ಯಕರ್ತರು ನಗರ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ಜೂಜು ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಬಾಗಿಲು ಮುಚ್ಚಿಸಿದರು. ಈ ವೇಳೆ DYFI ನ ಜಿಲ್ಲಾಧ್ಯಕ್ಷರಾದ ಬಿ.ಕೆ ಇಂಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರ್, ನವೀನ್ ಕೊಂಚಾಡಿ, ಹನೀಫ್ ಬೇಂಗ್ರೆ, ಮುಸ್ತಫ ಕಲ್ಲಕಟ್ಟೆ, ರಿಯಾಬ್, ಆಸೀಫ್, ಸಾಧಿಕ್ ಮುಂತಾದವರು ಉಪಸ್ಥಿತರಿದ್ದರು.