16-18 ವಯಸ್ಸಿನವರು ‘ಲವ್’ ಬಲೆಗೆ ಬಿದ್ದು ಎಸ್ಕೇಪ್ ಆದ ಪ್ರಕರಣಗಳೇ ಹೆಚ್ಚು.!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಪತ್ತೆಯಾಗಿರುವ ಮಕ್ಕಳ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, 2021 ಕ್ಕೆ ಹೋಲಿಸಿದರೆ 2022 ರಲ್ಲಿ ನಾಪತ್ತೆಯಾದ ಮಕ್ಕಳ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಐದು ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಮಕ್ಕಳ ಕಲ್ಯಾಣ ಸಮಿತಿಯು 2022 ರಲ್ಲಿ 33 ಹುಡುಗಿಯರು ಸೇರಿದಂತೆ ಒಟ್ಟು 62 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ನಾಪತ್ತೆಯಾದ 62 ಮಕ್ಕಳಲ್ಲಿ ಈಗಾಗಲೇ 60 ಮಂದಿಯನ್ನು ಪೊಲೀಸರು ಗುರುತಿಸಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದರೆ, ಇನ್ನೂ ಇಬ್ಬರು ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿ ಈ ವರೆಗೂ ಸಿಗಲಿಲ್ಲ ಅನ್ನಲಾಗಿದೆ.
ಬಾಲಾಪರಾಧಿ ನ್ಯಾಯ ಮಂಡಳಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾಣೆಯಾಗಲು ಹಲವು ಕಾರಣಗಳಿವೆ. ಆದಾಗ್ಯೂ ಅವರನ್ನು ಕೆಲವೇ ದಿನಗಳು ಅಥವಾ ವಾರಗಳಲ್ಲಿ ಪತ್ತೆ ಹಚ್ಚಲಾಗುತ್ತದೆ ಮತ್ತು ಮನೆಗೆ ಆ ಮಕ್ಕಳನ್ನ ಹಿಂತಿರುಗಿಸುವ ಪ್ರಯತ್ನ ಮಾಡಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾಣೆಯಾದ ಹೆಚ್ಚಿನ ಪ್ರಕರಣಗಳು ಲವ್ ಮಾಡಿ ಎಸ್ಕೇಪ್ ಆದುದಕ್ಕೆ ಸಂಬಂಧಿಸಿದೆ. ಇನ್ನು 16 ವರ್ಷದ ಹೆಚ್ಚಿನ ಮಕ್ಕಳು ಕಾಣೆಯಾಗುತ್ತಿರುವ ಹಿಂದೆಯೂ ಪ್ರೀತಿ, ಪ್ರೇಮಗಳ ಪ್ರಕರಣಕ್ಕೆ ಥಳುಕು ಹಾಕಿಕೊಂಡಿದ್ದು, ತಾನು ಓದುತ್ತಿರುವ ಸಹಪಾಠಿ ವಿಧ್ಯಾರ್ಥಿನಿಯ ಜೊತೆಗೆ ಓಡಿ ಹೋದ ಪ್ರಕರಣಗಳೇ ಹೆಚ್ಚು. ಓದುವ ವಯಸ್ಸಿನಲ್ಲಿ ಮಕ್ಕಳು ಪ್ರೀತಿ ಪ್ರೇಮದ ಬಲೆಗೆ ಬಿದ್ದು ಮನೆ ಬಿಟ್ಟು ಓಡಿ ಹೋಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಇದು ಕೇವಲ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಅಂಕಿ ಅಂಶಗಳಷ್ಟೇ. ಇನ್ನು ದೂರು ದಾಖಲಾಗದೆ ಓಡಿ ಹೋಗಿ ಮತ್ತೆ ಮನೆಗೆ ಸೇರಿದ ಪ್ರಕರಣಗಳು ಇನ್ನೆಷ್ಟಿರಬಹುದೋ..? ಸಣ್ಣ ಮಕ್ಕಳು ಪ್ರೀತಿ ಪ್ರೇಮದ ಹೆಸರಿನಲ್ಲಿ ಸಂಗಾತಿಯೊಂದಿಗೆ ಓಡಿ ಹೋಗುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.