*ದ.ಕ ಜಿಲ್ಲಾಧಿಕಾರಿಗಳೇ ತಮ್ಮ ಕಚೇರಿಯಲ್ಲಿ ಗೂಟ ಹೊಡೆದು ಕುಳಿತಿರುವ ನಾಲಾಯಕ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಿ *
ಪಡಿತರ ಚೀಟಿ (ರೇಶನ್ ಕಾರ್ಡ್) ಜನಸಾಮಾನ್ಯರ ಅತ್ಯಂತ ಪ್ರಮುಖ ದಾಖಲೆಗಳಲ್ಲೊಂದು. ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪಡಿತರ ಚೀಟಿ ಪ್ರಮುಖ ದಾಖಲೆಗಳು ಕೂಡ ಹೌದು. ರಾಜ್ಯ ಸರಕಾರ ಪಡಿತರ ಚೀಟಿ ತಿದ್ದುಪಡಿ ಸೇರಿದಂತೆ ಹೊಸ ಪಡಿತರ ಚೀಟಿ ನೋಂದಾಯಿಸಲು, ಜನಸಾಮಾನ್ಯರಿಗೆ ಸಮಸ್ಯೆ ಪರಿಹರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ. ಎ.ಸಿ ರೂಮಿನಲ್ಲಿ ಕುಳಿತ ದಪ್ಪ ಚರ್ಮದ ಅಧಿಕಾರಿಗಳು ಕೂಡಲೇ ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಕೇಂದ್ರ ಹಾಗೂ ಸೈಬರ್ ಸೆಂಟರ್ ಗಳಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದೆ. ಇದನ್ನು ನಂಬಿ ಬಡಜನರು ಕೆಲಸ ಬಿಟ್ಟು ಮಕ್ಕಳನ್ನು ಶಾಲೆ ಕಾಲೇಜಿಗೆ ರಜೆ ಹಾಕಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜಿಲ್ಲಾಧಿಕಾರಿ ಕಚೇರಿ, ಸೈಬರ್ ಕೇಂದ್ರಗಳಲ್ಲಿ ಕಾದು ಕೂತರೂ ಜನಸಾಮಾನ್ಯರ ಯಾವುದೇ ರೀತಿಯ ಕೆಲಸ ಆಗುತ್ತಿಲ್ಲ. ಸರ್ವರ್ ಇಲ್ಲದೆ ನಮ್ಮಿಂದ ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂದು ಸೈಬರ್ ಸೆಂಟರ್ ನವರು ಹೇಳಿದರೆ, ಇತ್ತ ಅಧಿಕಾರಿಗಳು ಸರ್ವರ್ ಸಮಸ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಜನಸಾಮಾನ್ಯರು ಮಾತ್ರ ಇವರಿಗೆ ಹಿಡಿಶಾಪ ಹಾಕಿ ಯಾವುದೇ ಕೆಲಸ ಆಗದೆ ವಾಪಾಸು ಮನೆಗೆ ತೆರಳುವಂತಾಗಿದೆ. ಈ ಬಗ್ಗೆ ಮಾನವ ಹಕ್ಕು ಹೋರಾಟಗಾರರಾದ ಕಬೀರ್ ಉಳ್ಳಾಲ್ ಜನಸಾಮಾನ್ಯರಿಗಾಗುತ್ತಿರುವ ತೊಂದರೆ ಬಗ್ಗೆ ಅಧಿಕಾರಿ ವರ್ಗ ಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮದು ಏನಿದ್ದರೂ ಡಿಜಿಟಲ್ ಸರಕಾರ ಎಂದು ಬಡಾಯಿಕೊಚ್ಚುವವರೇ ಒಂದು ಜುಜುಬಿ ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೆ ಇರುವುದು ನಿಮ್ಮದು ಎಂತಹ ಮಣ್ಣಾಂಗಟಿ ಡಿಜಿಟಲ್ ಯುಗ ಎಂದು ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಇಲಾಖೆಯಲ್ಲಿ ಭ್ರಷ್ಟ ತಿಮಿಂಗಿಲಗಳ ಕೂಟವೇ ತುಂಬಿದೆ. ಸ್ವಲ್ಪವೂ ಕರುಣೆಯೂ ಇಲ್ಲದೆ ಜನಸಾಮಾನ್ಯರೊಂದಿಗೆ ವರ್ತಿಸುತ್ತಿದ್ದಾರೆ. ಇಲ್ಲಿನ ಅಧಿಕಾರಿಯೊಬ್ಬ ಜನಸಾಮಾನ್ಯರಿಂದ ರೇಶನ್ ಕಾರ್ಡ್ ಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ವರ್ಷಗಟ್ಟಲೆ ಸತಾಯಿಸುವ ಹಲವಾರು ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಮೂರನೇ ಮಹಡಿಯಲ್ಲಿ ಬೆಚ್ಚಗೆ ಕೂತಿರುವ ಜಿಲ್ಲಾಧಿಕಾರಿಗಳು ತಮ್ಮ ಕಟ್ಟಡದಲ್ಲೇ ಇರುವ ಗೂಟ ಹಾಕಿ ಕುಳಿತಿರುವ ಇಂತಹ ನಾಲಾಯಕ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ.
ಸರ್ಕಾರವು ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ನೀಡುವ ಬದಲಿಗೆ ಜನರಿಗೆ ಸಮಸ್ಯೆಯನ್ನು ತಂದೊಡ್ಡುತ್ತಿರುವುದು ಯಾವ ನ್ಯಾಯ? ಜನಸಾಮಾನ್ಯರು ಸರ್ಕಾರ ಮತ್ತು ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಜನಸಾಮಾನ್ಯರಿಗಾಗುತ್ತಿರುವ ತೊಂದರೆಗಳಿಗೆ ತಕ್ಷಣ ಸ್ಪಂದಿಸಲಿ ಎಂಬುದು ಜನಸಾಮಾನ್ಯರ ಆಶಯ.