ಕೊನೆಗೂ ಸಿಕ್ಕೆ ಬಿಟ್ಟ ವೈಟ್ ಕಾಲರ್ ಕ್ರಿಮಿನಲ್ ಮಹಾರಾಯ; ಸ್ಯಾಂಟ್ರೋ ರವಿ

ರಾಜ್ಯ

ಗುಜರಾತ್ ನಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಟ್ರೋ ರವಿ ಆಲಿಯಾಸ್ ಕೆ.ಎಸ್.ಮಂಜುನಾಥ್ ರಾಯಚೂರಿಗೆ ಹೋಗಿ ಸ್ನೇಹಿತನ ಭೇಟಿಯಾಗಿ ಸಿಕ್ಕಿಬಿದ್ದಂತಾಗಿದೆ. ಈತ ರಾಯಚೂರಿಗೆ ಬಂದು ಹೋಗಿದ್ದಕ್ಕೆ ಸಿಕ್ಕ ಚೂರು ಸುಳಿವೇ ಬಂಧನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ರಾಯಚೂರು ಎಸ್.ಪಿ ಬಿ.ನಿಖಿಲ್ ನಿನ್ನೆ ಸ್ಯಾಂಟ್ರೋ ರವಿ ಆಪ್ತ ಚೇತನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ರವಿ ಕುರಿತ ಸುಳಿವು ಸಿಕ್ಕಿದೆ. ನಿನ್ನೆ ಮಂತ್ರಾಲಯದಲ್ಲಿ ಚೇತನ್ ನನ್ನು ವಶಕ್ಕೆ ಪಡೆದ ಎಸ್ಪಿ, ರವಿ ಮಾಹಿತಿ ಕಲೆ ಹಾಕಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದೇ ಮಾಹಿತಿಯ ಆಧಾರದ ಮೇಲೆ ಇಂದು ಕರ್ನಾಟಕ ಪೊಲೀಸರು ಗುಜರಾತ್ ನಲ್ಲಿ ಸ್ಯಾಂಟ್ರೋ ರವಿಯ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

ಮಂತ್ರಾಲಯಕ್ಕೆ ಸ್ಯಾಂಟ್ರೋ ರವಿ ಹಾಗೂ ಆಪ್ತ ಚೇತನ್ ಬಂದು ಹೋಗಿದ್ದ ಮಾಹಿತಿಯನ್ನು ಎಸ್ಪಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದರು. ಸ್ಯಾಂಟ್ರೋ ರವಿ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್ಪಿ ನಿಖಿಲ್ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕಣ್ತಪ್ಪಿಸಿ ಮಂತ್ರಾಲಯಕ್ಕೆ ಬಂದು ಹೋಗಿರೋ ಸ್ಯಾಂಟ್ರೋ ರವಿ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಗೌಪ್ಯವಾಗಿ ರಾಯರ ದರ್ಶನ ಪಡೆದು, ರಾತ್ರಿ ಮಂತ್ರಾಲಯದಲ್ಲೇ ವಾಸ್ತವ್ಯ ಮಾಡಿದ್ದ ಎನ್ನಲಾಗುತ್ತಿದೆ. ಪೊಲೀಸರ ಶೋಧ ತೀವ್ರವಾಗಿರುವುದನ್ನು ಅರಿತು ಮಂತ್ರಾಲಯದಿಂದ ಕಾಲ್ಕಿತ್ತಿದ್ದ ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ.