ಗಣ್ಯ ವ್ಯಕ್ತಿಗಳ ಪ್ರೀತಿಯ ಮಾಮ! ಸ್ಯಾಂಟ್ರೋ ರವಿಯ ಲೀಲೆಗಳು

ರಾಜ್ಯ

ಐಷಾರಾಮಿ ಮನೆಗಳೇ ಈತನ ವೇಶ್ಯಾವಾಟಿಕೆ ಅಡ್ಡೆಗಳು..!

ಗಣ್ಯ ವ್ಯಕ್ತಿಗಳ ಪ್ರೀತಿಯ ಮಾಮಾ, ಸ್ಯಾಂಟ್ರೋ ರವಿ ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಹರಾಮಿನ ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿರುವ ಕೆ.ಎಸ್.ಮಂಜುನಾಥ್ ಯಾನೆ ಸ್ಯಾಂಟ್ರೋ ರವಿಯ ಕಥೆಗಳು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಂಡಿತ್ತು.

ಸ್ಯಾಂಟ್ರೋ ರವಿಗೆ ಮನೆ ಬಾಡಿಗೆಗೆ ನೀಡಿದ್ದ ವ್ಯಕ್ತಿ ಹೇಳುವ ಪ್ರಕಾರ, ಸ್ಯಾಂಟ್ರೋ ರವಿ ಅಪಾರ್ಟ್ ಮೆಂಟ್ ಬಾಡಿಗೆ ಪಡೆದುಕೊಂಡಿದ್ದಾಗ, ಮನೆಗೆ ನಟಿಯರು, ಮಾಡೆಲ್ ಗಳು, ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ಬರುತ್ತಿದ್ದರು ಎಂದು ಹೇಳಿದ್ದಾರೆ.

2000ನೇ ಇಸವಿಯಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ತನ್ನ ವೃತ್ತಿಯನ್ನು ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನು ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ವಕೀಲೆ ಎಂದು ಬೆದರಿಸಿ ಹಲವರಿಗೆ ವಂಚಿಸಿದ್ದ ಎನ್ನಲಾಗಿದೆ. ತನ್ನ ಶೋಕಿಗಾಗಿ ಮೂರು ನಾಲ್ಕು ಕಾರುಗಳನ್ನು ಈತ ಇಟ್ಟುಕೊಂಡಿದ್ದ.

ಆರ್​.ಆರ್​ ನಗರ ಪೊಲೀಸರ ಎದುರೇ ಸ್ಯಾಂಟ್ರೋ ರವಿ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನಂತೆ. ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡಿರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಮೊಬೈಲ್‌ ಫೋನಲ್ಲೇ ಚೆಂದದ ಯುವತಿಯರು ಬುಕಿಂಗ್ ಆಗ್ತಿದ್ರೆ, ದೊಡ್ಡ ದೊಡ್ಡ ಬಂಗಲೆ, ಡ್ಯೂಪ್ಲೆಕ್ಸ್‌ ಮನೆಗಳು, ಪೆಂಟ್‌ಹೌಸ್‌ಗಳು, ವಿಲ್ಲಾಗಳು ಹೀಗೆ, ಐಷಾರಾಮಿ ಮನೆಗಳನ್ನ ಬಾಡಿಗೆ ಪಡೀತಿದ್ದನಂತೆ. ಇದೇ ಐಷಾರಾಮಿ ಮನೆಗಳನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡು ಪಲ್ಲಂಗ ಸೇವೆಗೆ ವ್ಯವಸ್ಥೆ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿವೆ.

ಈತನ ಈ ಕತ್ತಲ ಲೋಕದ ನೆಟ್‌ವರ್ಕ್‌ ಎಷ್ಟು ದೊಡ್ಡದಾಗಿದೆ ಅಂದ್ರೆ, ವಿದೇಶದಲ್ಲೂ ಈತ ಲಿಂಕ್‌ ಹೊಂದಿದ್ದ ಎನ್ನಲಾಗಿದೆ.. ತನ್ನ ಕಸ್ಟಮರ್‌ಗಳಿಗೆ ಸರ್ವಿಸ್‌ ಕೊಡಲು ಬರೀ ಲೋಕಲ್‌ ಹುಡುಗಿಯರು ಮಾತ್ರವಲ್ಲ, ರಷ್ಯಾ ಮತ್ತು ಇರಾನ್‌, ದೆಹಲಿ, ಮುಂಬೈ ಕೋಲ್ಕತ್ತಾದಿಂದಲೂ ಯುವತಿಯರನ್ನ ಕರೆಸ್ತಿದ್ದ ಎಂಬ ಮಾಹಿತಿ ಇದೆ.

ಚೆಂದದ ಯುವತಿಯರನ್ನು ಬಳಸಿಕೊಂಡು ಈ ಕಿಲಾಡಿ ಸ್ಯಾಂಟ್ರೋ ರವಿ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಸಾಧಿಸ್ತಿದ್ದ.. ತನ್ನ ಕೆಲಸಗಳಿಗೆ ಸಹಕರಿಸಿದ ಯುವತಿಯರಿಗೆ ದುಬಾರಿ ಗಿಫ್ಟ್‌ಗಳನ್ನೂ ಕೊಡ್ತಿದ್ದನಂತೆ.. ತನ್ನ ಬ್ಯುಸಿನೆಸ್‌ಗೆ ಸಹಕರಿಸಿದ್ದ ಯುವತಿಯೊಬ್ಬಳಿಗೆ ಬರೋಬ್ಬರಿ 1 ಲಕ್ಷ 83 ಸಾವಿರ ರೂಪಾಯಿ ಮೌಲ್ಯದ ವಾಚ್‌ನ್ನು ಸ್ಯಾಂಟ್ರೋ ರವಿ ಗಿಫ್ಟ್‌ ಮಾಡಿದ್ದನಂತೆ.. ಯುವತಿ ಜೊತೆಗೆ ವಾಚ್‌ ಖರೀದಿಸುವ ಫೋಟೋ, ದೃಶ್ಯವನ್ನೂ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿಕೊಂಡಿದ್ದನಂತೆ.

ಸ್ಯಾಂಟ್ರೋ ರವಿ ಶೋಕಿವಾಲನಾಗಿದ್ದ. ಅಡ್ಡ ದಾರಿಯಲ್ಲಿ ದುಡಿದ ದುಡ್ಡನ್ನು ಶೋ ಆಫ್‌ ಮಾಡ್ತಿದ್ದ.ಕಂತೆ ಕಂತೆ ನೋಟಿನ ಕಟ್ಟುಗಳ ಫೋಟೋಗಳು, ವೀಡಿಯೋಗಳನ್ನು ವಾಟ್ಸಾಪ್‌ನಲ್ಲಿ ಶೇರ್‌ ಮಾಡ್ತಿದ್ದ.ಕಾರುಗಳು ಬಂಗಲೆಗಳ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದ.ಚೆಂದದ ಚೆಲುವೆಯರ ಪೋಟೊಗಳನ್ನು ವಾಟ್ಸ್ ಅಪ್ ನಲ್ಲಿ ಶೇರ್ ಮಾಡ್ತಿದ್ದ!

ವಿರೋಧಿಗಳನ್ನು ಹೆದರಿಸಲು ಪಿಸ್ತೂಲಿನ ಫೋಟೋಗಳನ್ನು ಕೂಡ ಸ್ಯಾಂಟ್ರೋ ರವಿ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿದ್ದ. ಸ್ಯಾಂಟ್ರೋ ರವಿಯ ಅಸಲಿ ನಾಮ ಕೆ.ಎಸ್. ಮಂಜುನಾಥ್ ಹೆಸರಲ್ಲಿ ಪತ್ರಕರ್ತನ ಐಡಿ ಕಾರ್ಡ್‌ ಪತ್ತೆಯಾಗಿದೆ. ಸಂಚಲನ ಅನ್ನೋ ವಾರಪತ್ರಿಕೆಯ ಸಬ್ ಎಡಿಟರ್ ಎಂದು ನಮೂದಾಗಿದೆ.ಹೀಗಾಗಿ, ಪತ್ರಕರ್ತನ ಸೋಗಿನಲ್ಲೂ ಸ್ಯಾಂಟ್ರೋ ರವಿ ವಂಚನೆ ಮಾಡಿದ್ದಾನಾ ಅನ್ನೋ ತನಿಖೆ ನಡೆಯುತ್ತಿದೆ.

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಸ್ಯಾಂಟ್ರೋ ರವಿ ಇದೀಗ ಪೊಲೀಸರ ವಶದಲ್ಲಿದ್ದು, ಈತನ ಒಂದೊಂದೇ ಕೃತ್ಯಗಳು ಬಯಲಾಗಲಿದೆ.

ಅಂದ ಹಾಗೆ ಈತ ವರ್ಗಾವಣೆ ಮಾಡಿಸಿರುವ ಪೊಲೀಸ್ ಅಧಿಕಾರಿಗಳಿಗೆ ಕೂಡ ಸಂಕಷ್ಟವಾಗಲಿದೆ ಎನ್ನಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ಅಕ್ರಮಗಳು ನಡೆಯುತ್ತಿದೆ ಎಂದರೆ, ನಮ್ಮ ಭದ್ರತಾ ವ್ಯವಸ್ಥೆಗಳ ಗತಿ ಏನು? ಅನ್ನೋ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ