ಪುತ್ತೂರಿನ ಪಾತಕಿ ಜಯೇಶನಿಂದ ಕೇಂದ್ರದ ಮಂತ್ರಿಗೆ ಕೊಲೆ ಬೆದರಿಕೆ

ರಾಷ್ಟ್ರೀಯ

ಕೇಂದ್ರ‌ ಸಚಿವ ನಿತಿನ್‌ ಗಡ್ಕರಿಯವರಿಗೆ ಜೈಲಿನಿಂದ ಬೆದರಿಕೆಯ ಕರೆ ಮಾಡಿದ ಆರೋಪಿಯನ್ನು ಪತ್ತೆ ಮಾಡಲಾಗಿದೆ.ಬೆಳಗಾವಿ ಬಂಧಿಖಾನೆಯಲ್ಲಿ ಬಂಧನದಲ್ಲಿರುವ ಪಾತಕಿ ಪುತ್ತೂರಿನ ಜಯೇಶ್‌ ಎಂಬಾತ ಈ ಕರೆ ಮಾಡಿದ್ದಾನೆ.

ಜಯೇಶ್‌ ಹಲವಾರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿ ಕೊಲೆ,ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಕೇಂದ್ರ ಸಚಿವ ಗಡ್ಕರಿಯವರ ದೂರವಾಣಿಗೆ ಕರೆ ಮಾಡಿ 100 ಕೋಟಿ ಹಣ ನೀಡುವಂತೆ ಬೇಡಿಕೆ ಇರಿಸಿ ಬೆದರಿಕೆ ಹಾಕಿದ್ದ ಎಂದು ನಾಗ್ಪುರ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದಾರೆ.ಜಯೇಶ್‌ ಪುತ್ತೂರಿನಲ್ಲಿ ನಡೆದ ಕೊಲೆ ಕೇಸೊಂದಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಳಗಾವಿ ಜೈಲಿನಲ್ಲಿದ್ದಾನೆ.

ಈ ಹಿಂದೆ ಜೈಲಿನಲ್ಲಿದ್ದುಕೊಂಡೇ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೂ ಜೀವ ಬೆದರಿಕೆ ಕರೆ ಮಾಡಿದ್ದ ಜಯೇಶ್,ಕೊಲೆ ಕೇಸ್‌ ಸಂಬಂಧ ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಕೋರ್ಟ್‌ ಕಿಟಕಿ ಹಾರಿ ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನ ಮಾಡಿದ್ದ.ಕಾಸರಗೋಡಿನ ಹುಡುಗಿಯೊಬ್ಬಳನ್ನು ಮದುವೆಯಾಗಿ ಆಕೆಯೊಂದಿಗೆ ಗಲಾಟೆ ಮಾಡಿ ಪರಾರಿಯಾಗಿದ್ದ.ಇದೀಗ ಕೇಂದ್ರದ ಮಂತ್ರಿಗಳಿಗೂ ಧಮಕೀ ಹಾಕುವಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದ್ದಾನೆ.