ಮಗಳ ಮೇಲೆಯೇ 3 ವರ್ಷ ಕಾಲ ಅತ್ಯಾಚಾರ ಎಸಗಿದ ತಂದೆ.ಮೊಬೈಲ್​​ನಲ್ಲಿ ಸಿಕ್ಕಿತು ಮಗಳ ಅಶ್ಲೀಲ ಭಂಗಿ

ರಾಷ್ಟ್ರೀಯ

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಯೇ ಮೂರು ವರ್ಷಗಳ ಕಾಲ ತಂದೆಯಾದವನೇ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಗಂಡನ ಮೊಬೈಲ್​​ನಲ್ಲಿ ಅತನ ಪತ್ನಿ ಆಕಸ್ಮಿಕವಾಗಿ ತಮ್ಮ ಮಗಳ ಕೆಲವು ಅಶ್ಲೀಲ ಫೋಟೋಗಳ ಭಂಗಿ ಕಂಡ ನಂತರ ವಿಷಯ ಬೆಳಕಿಗೆ ಬಂದಿದೆ. ಈತನ ವಿರುದ್ಧ ದಿಶಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಯು ವಿಜಯವಾಡದ ಮಚಹ್ವರಂ ನಿವಾಸಿಯಾಗಿದ್ದು, ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯ ರೊಂದಿಗೆ ವಾಸವಾಗಿದ್ದಾನೆ. ಕಾರು ಚಾಲಕ ಮತ್ತು ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ತನ್ನ ಗಂಡನ ನಡವಳಿಕೆ ಮೊದಲಿನಿಂದಲೂ ಸರಿ ಇಲ್ಲದ ಕಾರಣ ಹೆಣ್ಣು ಮಕ್ಕಳನ್ನು ಹಾಸ್ಟೆಲ್​​ನಲ್ಲಿ ಬಿಟ್ಟಿದ್ದರು.ಈ ತಿಂಗಳು ಮಕ್ಕಳು ಮನೆಗೆ ಬಂದಿದ್ದರು. ಈ ವೇಳೆ ಆತನಿಗೂ ಹಾಗೂ 13 ವರ್ಷದ ಹಿರಿಯ ಮಗಳ ನಡುವೆ ಜಗಳ ನಡೆದಿದೆ. ಮಗಳನ್ನು ಬೆಲ್ಟ್‌ನಿಂದ ಥಳಿಸಿದ್ದಾನೆ. ಇದನ್ನು ತಡೆಯಲು ಬಂದ ಹೆಂಡತಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಅದೇ ದಿನ ಮಕ್ಕಳು ಹಾಸ್ಟೆಲ್​​ಗೆ ಹಿಂದಿರುಗಿದ್ದಾರೆ.

ಜನವರಿ 10 ರಂದು ಮತ್ತೆ ಮನೆಗೆ ಬಂದಿದ್ದಾರೆ. ಅಂದು ಸಂಜೆ ಆತ ಬ್ಯಾಂಕ್ ಕೆಲಸಕ್ಕಾಗಿ ತನ್ನೊಂದಿಗೆ ಬರುವಂತೆ ಹೇಳಿ ತನ್ನ ಹಿರಿಯ ಮಗಳನ್ನು ಬೈಕ್​​ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಆಕೆಯನ್ನು ರಾಮವರಪ್ಪಡು ಮೇಲ್ಸೇತುವೆ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.ಆಕಸ್ಮಿಕವಾಗಿ ಪತ್ನಿ ಆತನ ಮೊಬೈಲ್​ ನೋಡಿದ್ದು, ಅದರಲ್ಲಿ ತನ್ನ ಹಿರಿಯ ಮಗಳ ಅಶ್ಲೀಲ ಫೋಟೋಗಳ ಭಂಗಿ ಸಿಕ್ಕಿವೆ. ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಅಲ್ಲದೇ ಅಪ್ಪ ತನ್ನ ಮೇಲೆ ಕಳೆದ ಮೂರು ವರ್ಷಗಳಲ್ಲಿ ನಿರಂತರ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂಬುದನ್ನೂ ಮಗಳು ಬಾಯ್ಬಿಟ್ಟಿದ್ದಾಳೆ. ಮಹಿಳೆಯು ತನ್ನ ಪತಿ ವಿರುದ್ಧ ದೂರು ನೀಡಿದ್ದು, ಆರೋಪಿಯ ವಿರುದ್ಧ ದಿಶಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.