ಕಳೆದ ಆರೇಳು ತಿಂಗಳುಗಳಿಂದ ಜಾನುವಾರುಗಳಲ್ಲಿ ಲಂಪಿ ವೈರಸ್ ಎಂಬ ವೈರಸ್ ನಿಂದ ಹರಡುವ ಚರ್ಮಗಂಟು ರೋಗ ಇದೀಗ ವ್ಯಾಪಕವಾಗಿ ಹಬ್ಬುತ್ತಿದೆ. ದನ,ಕರು ಮತ್ತು ಎಮ್ಮೆಗಳು ಈ ಕಾಯಿಲೆಗೆ ತುತ್ತಾಗುತ್ತಿವೆ. ಆರಂಭದಲ್ಲಿ ರಾಸುಗಳ ಮೈಮೇಲೆ ಗಂಟು ಕಾಣಿಸಿಕೊಳುತ್ತದೆ. ನಂತರ ಈ ಗಂಟುಗಳು ಒಡೆದು, ಹುಣ್ಣಾಗಿ, ಕೀವು ತುಂಬಿ ಜ್ವರ ಬರುತ್ತದೆ. ಜಾನುವಾರುಗಳು ನಿಶ್ಶಕ್ತವಾಗಿ ಸಾಯುತ್ತವೆ.
ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡಿದ್ದು, ಹಲವಾರು ಜಾನುವಾರು ಸಾವಿಗೀಡಾಗಿವೆ. ಕೆಲವೇ ಕೆಲವು ಜಾನುವಾರುಗಳು ಸಂಪೂರ್ಣವಾಗಿ ಗುಣಮುಖವಾಗಿದೆ.ಚರ್ಮ ಗಂಟು ರೋಗವು ನೇರವಾಗಿ ಜಾನುವಾರುಗಳ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರು ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಲು ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸಲು 2022ರ ಆಗಸ್ಟ್ 1ರಿಂದ ಅನ್ವಯ ಆಗುವಂತೆ ಪ್ರತಿ ಹೈನು ರಾಸುಗಳಿಗೆ ಗರಿಷ್ಠ 20,000 ರೂ. ಮತ್ತು ಎತ್ತುಗಳಿಗೆ 30,000 ರೂ. ಹಾಗೂ ಪ್ರತಿ ಕರುವಿಗೆ 5,000 ರೂ. ಪರಿಹಾರ ನೀಡಲಾಗುತ್ತಿದೆ.ರಾಜ್ಯದಲ್ಲಿ ಜಾನುವಾರುಗಳ ಚರ್ಮಗಂಟು ರೋಗವನ್ನು ಹತೋಟಿ ತರಲಾಗುತ್ತಿದೆ. ರಾಜ್ಯಾದ್ಯಂತ 53 ಲಕ್ಷಕ್ಕೂ ಹೆಚ್ಚಿನ ರಾಸುಗಳಿಗೆ ಲಸಿಕೆ ನೀಡಲಾಗಿದ್ದು, ಲಭ್ಯವಿರುವ 40 ಲಕ್ಷ ಡೋಸ್ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ.
ಚರ್ಮಗಂಟು ರೋಗ ಗಾಳಿ, ನೀರಿನ ಮೂಲಕ ಹರಡಬಹುದು. ಹೀಗಾಗಿ ಎಚ್ಚರಿಕೆ ವಹಿಸಿ. ಒಂದು ಊರಿನಿಂದ ಮತ್ತೊಂದು ಊರಿಗೆ ಪಶುಗಳನ್ನು ಸಾಗಾಟ ಮಾಡಬಾರದು. ನೊಣ, ಸೊಳ್ಳೆಗಳ ಮೂಲಕ ಹರಡುವ ಕಾರಣ ಜಾಗ್ರತೆ ವಹಿಸಬೇಕು. ಜೊತೆಗೆ ಜಾನುವಾರುಗಳ ಹಟ್ಟಿಯನ್ನು ಸ್ವಚ್ಛವಾಗಿಡುವುದು, ಕೊಟ್ಟಿಗೆಯ ಸಮೀಪ ಗೊಬ್ಬರ ರಾಶಿ ಹಾಕದೆ ಸೊಳ್ಳೆಯ ನಿಯಂತ್ರಣ ಮಾಡಬೇಕು. ಗೊಬ್ಬರದ ನೀರು ಶೇಖರಣೆ ಆಗುವ ಜಾಗದಲ್ಲಿ ಕೀಟನಾಶಕ ಅಥವಾ ಸೀಮೆಎಣ್ಣೆ ಹಾಕಿ ಸೊಳ್ಳೆಯ ಲಾರ್ವಾ ಬೆಳೆಯದಂತೆ ನೋಡಿಕೊಳ್ಳಬೇಕು.
ಮುಂಜಾಗ್ರತಾ ಕ್ರಮದಿಂದ ಈ ರೋಗವನ್ನು ನಿಯಂತ್ರಣಕ್ಕೆ ತರಬಹುದು ಎಂದು ಪಶು ವೈದ್ಯಾಧಿಕಾರಿಗಳು ಹೇಳುತ್ತಾರೆ.