ಜಾತ್ರೆಯಲ್ಲಿ ಮುಸ್ಲೀಂ ವ್ಯಾಪಾರಿಗಳನ್ನು ಬಹಿಷ್ಕರಿಸುವಾಗ ಈ ಇತಿಹಾಸ ತಿಳಿದಿದ್ದರೆ ಒಳ್ಳೆಯದು.
✍️. ನವೀನ್ ಸೂರಿಂಜೆ
ಮಂಗಳೂರಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲೀಮರಿಗೆ ವ್ಯಾಪಾರ ಬಹಿಷ್ಕರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಬ್ಯಾನರ್ ಹಾಕಿದೆ. ಅಂದು ಒಂದು ಕಾಲದಲ್ಲಿ ಕೂಳೂರು ಬಂಗರಸರ ಜೊತೆ ಮುಸಲ್ಮಾನರು ನಿಲ್ಲದೇ ಇದ್ದರೆ ಇಂದು ದೇವಸ್ಥಾನವಿದ್ದ ಜಾಗದಲ್ಲಿ ಪೋರ್ಚುಗೀಸರ ಕಾಲದ ಗೆಸ್ಟ್ ಹೌಸ್ ಇದ್ದಿರಬೇಕಿತ್ತು. ಈ ಇತಿಹಾಸವನ್ನು ಕೂಳೂರು- ಕಾವೂರಿನ ಜನರೂ, ಅರ್ಚಕರೂ, ಕರ್ಣಂತಾಯ ಮನೆತನದವರೂ, ಸೀಮೆಯ 4 ಗುತ್ತಿನವರೂ ತಿಳಿಯದೇ ಹೋದರೆ ದೇವಸ್ಥಾನದ ಐತಿಹ್ಯಕ್ಕೆ ಅವಮಾನ ಮಾಡಿದಂತಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ 12 ಬಲ್ಲಾಳ ಅರಸು ಮನೆತನಗಳ ಪೈಕಿ ಕೂಳೂರು ದೊರೆಬಲ್ಲಾಳ ಮನೆತನವೂ ಒಂದು. ಈ ವಂಶದವರು ಪಂಜಿಮೊಗರು, ಪಡುಕೋಡಿ, ಕಾವೂರು, ಕುಂಜತಬೈಲು, ಮರಕಡ, ಕೂಳೂರು ಗ್ರಾಮಗಳನ್ನು ಆಳಿಕೊಂಡಿದ್ದರು. ಈ ಅರಸು ಮನೆತನದವರ ಹೆಸರು ಕೂಳೂರು ಕರ್ಣಂತಾಯ ದೊರೆಬಲ್ಲಾ ಳ. ಮರಕಡ ಗ್ರಾಮದ ಪಾಣಂಜೆ, ಪಡುಕೋಡಿ, ಕುಂಜತ್ತkಬೈಲಿನ ಎರ್ಮಜಿಲು, ಕಾವೂರು ಗ್ರಾಮದ ಮಾಲಾಡಿ ಗುತ್ತುಗಳು ಈ ಅರಸರ ಆಧೀನದಲ್ಲಿ ಬರುವ ಗುತ್ತುಗಳಾಗಿದೆ. ಕಾವೂರು ಮಹಾಲಿಂಗೇಶ್ವರ ದೇವಸ್ಥಾನವು ಕೂಳೂರು ದೊರೆಬಲ್ಲಾಳ ಅರಮನೆಯ ಸೀಮೆ ದೇವಸ್ಥಾನವಾಗಿದೆ. ಕಾವೂರು ದೇವಸ್ಥಾನದ ಅರ್ಚಕರು ರಾಜಪುರೋಹಿತರು. ಕೆಳದಿವೀರ ಭದ್ರಪ್ಪನಾಯಕನಿಗೂ ಬಂಗರ ರಾಣಿ ‘ಶಂಕರದೇವಿ ಬಂಗರಾಣಿ’ಗೂ ಆದ ಕರಾರಿನ ಪ್ರಕಾರ ಈ ಸೀಮೆಯ ಕೂಳೂರು ಗ್ರಾಮವು ಶಂಕರದೇವಿ ಬಂಗರಾಣಿಗೆ ಕೊಡಲ್ಪಟ್ಟಿತು. ಅಂದಿನಿಂದ ಆ ಗ್ರಾಮಕ್ಕೆ ಬಂಗ್ರಕೂಳೂರು ಎಂದು ಹೆಸರಾಯಿತು.
ಕ್ರಿ.ಶ1541ರಲ್ಲಿ ವಿಜಯನಗರದ ರಾಮರಾಯನ ಆಳ್ವಿಕೆಯಲ್ಲಿ ಪೋರ್ತುಗೀಸರಿಗೂ ಈ ರಾಮರಾಯರಿಗೂ ಆದ ಒಪ್ಪಂದದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರವನ್ನು ಸಂಪೂರ್ಣವಾಗಿ ಪೋರ್ಚುಗೀಸರಿಗೆ ಒಪ್ಪಿಸಲಾಯಿತು. ಕರಾವಳಿಯ ತುಂಡು ಅರಸರುಗಳು ಪೋರ್ಚುಗೀಸರಿಗೆ ಕಪ್ಪ ಕೊಡಬೇಕು ಎಂದು ಆದೇಶಿಸಲಾಯಿತು. ಆದರೆ ಬಲ್ಲಾಳ ಅರಸರಾದ ಕೂಳೂರು ಬಲ್ಲಾಳ, ಮಂಗಳೂರು ಬಂಗರಾಜ, ಉಳ್ಳಾಲದ ಚೌಟರ ರಾಣಿ ಅಬ್ಬಕ್ಕ, ಕುಂಬಳೆ ಅರಸರು ಪೋರ್ತುಗೀಸರಿಗೆ ಕಪ್ಪವನ್ನು ಕೊಡಲು ನಿರಾಕರಿಸಿದರು. ಇದರಿಂದ ಕೆರಳಿದ ಪೋರ್ತುಗೀಸರು ಬಾರ್ಕೂರು, ಮಂಗಳೂರು, ಉಳ್ಳಾಲ ಮುಂತಾದ ಬಂದರುಗಳು, ಪೇಟೆಗಳು, ಕೋಟೆಗಳು, ದೇವಸ್ಥಾನ, ಅರಮನೆಗಳನ್ನು ಸುಡುತ್ತಾ, ನಾಶ ಮಾಡುತ್ತಾ ಬಂದರು. ಈ ಸಂದರ್ಭದಲ್ಲಿ ಕರಾವಳಿಯ ಮುಸಲ್ಮಾನರು ಬಂಗ್ರಕೂಳೂರಿನಲ್ಲಿದ್ದ ಬಂಗರಾಜನ ಸೇನೆಯಲ್ಲೂ, ಉಲ್ಲಾಳದ ರಾಣಿ ಅಬ್ಬಕ್ಕನ ಸೈನ್ಯದಲ್ಲೂ ಸೈನಿಕರಾಗಿದ್ದರು. ಮುಸಲ್ಮಾನರ ಸೈನ್ಯದ ಬಲದೊಂದಿಗೆ ಬಂಗರಾಜನು ಪೋರ್ಚುಗೀಸರ ಜೊತೆ ಯುದ್ದ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದನು. ಅಂದು ಮುಸಲ್ಮಾನ ಸೈನ್ಯದ ಬಲದಿಂದ ಪೋರ್ಚುಗೀಸರನ್ನು ಓಡಿಸದೇ ಇದ್ದರೆ ಬಂಗ್ರಕೂಳೂರು, ಕೂಳೂರು, ಕಾವೂರು ಪ್ರದೇಶಗಳು ಅಂದಿನ ಪೋರ್ಚುಗೀಸರ ಪ್ರಮುಖ ವ್ಯಾಪಾರ ಕೇಂದ್ರವಾಗುತ್ತಿತ್ತು. ಸಮುದ್ರ ಮತ್ತು ನದಿ ಸೇರುವ ಕೂಳೂರು ಪ್ರದೇಶ ಪೋರ್ಚುಗೀಸರ ವ್ಯಾಪಾರಕ್ಕೆ ಪ್ರಸಕ್ತ ಸ್ಥಳವಾಗಿತ್ತು. ಅಂದು ಮುಸಲ್ಮಾನರು ಬಂಗರಾಜರ ಜೊತೆ ನಿಲ್ಲದೇ ಇದ್ದರೆ ಕೂಳೂರು ಕರ್ಣಂತಾಯ ದೊರೆಬಲ್ಲಾಳ ಮನೆತನವೂ ಇರುತ್ತಿರಲಿಲ್ಲ, ಸೀಮೆಯ ದೇವಸ್ಥಾನವಾಗಿರುವ ಕಾವೂರು ಮಹಾಲಿಂಗೇಶ್ವರ ದೇವಸ್ಥಾನವೂ ಇರುತ್ತಿರಲಿಲ್ಲ. ಈಗ ಉಳಿದು-ಬೆಳೆದು ನಿಂತಿರುವ ಐತಿಹಾಸಿಕ ಕಾವೂರು ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿ ಮುಸ್ಲೀಂ ವ್ಯಾಪಾರಿಗಳನ್ನು ಬಹಿಷ್ಕರಿಸುವಾಗ ಈ ಇತಿಹಾಸ ತಿಳಿದಿದ್ದರೆ ಒಳ್ಳೆಯದು.
ಇಷ್ಟಕ್ಕೂ ವಿಶ್ವಹಿಂದೂ ಪರಿಷತ್ತಿಗೂ ಕಾವೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಏನು ಸಂಬಂಧ ? ಕಾವೂರು ಮಹಾಲಿಂಗೇಶ್ವರ ದೇವಸ್ಥಾನ ಊರಿಗೆ ಸಂಬಂಧಿಸಿದ ದೇವಸ್ಥಾನ. ಧಾರ್ಮಿಕ ರೀತಿ ರಿವಾಜುಗಳ ಪ್ರಕಾರ ಕರ್ಣಂತಾಯ ದೊರೆಬಲ್ಲಾಳ ಮನೆತನವೂ, ಸೀಮೆಯ ನಾಲ್ಕು ಗುತ್ತುಗಳಿಗೆ ಸಂಬಂಧಿಸಿದ ಐತಿಹಾಸಿಕ ದೇವಸ್ಥಾನವಿದು. ಒಂದು ಬೀಡು, ನಾಲ್ಕು ಗುತ್ತುಗಳು, ಗ್ರಾಮಸ್ಥರು, ಜಿಲ್ಲಾಡಳಿತವು ಕಾವೂರು ದೇವಸ್ಥಾನದ ನಿಯಮಾವಳಿಯನ್ನು ರೂಪಿಸಬೇಕೇ ಹೊರತು ದೇವಸ್ಥಾನಕ್ಕೆ ಸಂಬಂಧಪಡದ ವಿಶ್ವ ಹಿಂದೂಪರಿಷತ್ ಅಲ್ಲ. ಈ ರೀತಿ ಗುತ್ತು ಬರ್ಕೆ, ಬೀಡು, ಸಮುದಾಯಗಳ ಧಾರ್ಮಿಕ ಅಧಿಕಾರವನ್ನು ಯಾವುದೋ ಸಂಘಟನೆ ಕಸಿದುಕೊಳ್ಳುವುದೇ ಹಿಂದುತ್ವದ ಮೇಲಿನ ನಿಜವಾದ ದಾಳಿಯಾಗಿದೆ.