ಬೆಚ್ಚಿಬೀಳಿಸುವ ಭಯಾನಕ ಮೋಸದ ಜಾಲ

ರಾಜ್ಯ

ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರನ್ನು ವಿದೇಶಕ್ಕೆ ಮಹಿಳೆಯರನ್ನು ಮಾರಾಟ ಜಾಲ.!

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಕುವೈತ್ ರಾಷ್ಟ್ರಕ್ಕೆ ಸೇಲ್ ಮಾಡಿರುವ ಬೆಚ್ಚಿಬೀಳಿಸುವ ಮೋಸದ ಜಾಲ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಚಿಕ್ಕಿ ಎಂಬುವರ 35 ವರ್ಷದ ಮಗಳು ಪಾರ್ವತಿ ಈಗ ಕುವೈತ್ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತಿಯಿಂದ ದೂರವಾಗಿ ಚಿಕ್ಕ ಎರಡು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದ ಪಾರ್ವತಿ ಎಂಬಾಕೆಗೆ ವಿದೇಶದಲ್ಲಿ 30 ಸಾವಿರ ಸಂಬಳ ಕೊಡಿಸುವುದಾಗಿ ಹೇಳಿದ್ದ ಊಟಿಯ ಖಾಸಗಿ ಏಜೆನ್ಸಿಯೊಂದರ ಹನೀಫ್ ಎಂಬಾತ ಮಹಿಳೆಯನ್ನು 3 ಲಕ್ಷ ರೂಪಾಯಿಗೆ ಸೇಲ್ ಮಾಡಿದ್ದಾನೆ ಎನ್ನಲಾಗಿದೆ.

ಚಿಕ್ಕ ಎರಡು ಮಕ್ಕಳ ಜೊತೆಗೆ ವಯಸ್ಸಾದ ತನ್ನ ತಂದೆ ತಾಯಿಯನ್ನು ನೆಮ್ಮದಿಯಾಗಿ ಇರಿಸಬೇಕು, ಮಕ್ಕಳ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎನ್ನುವ ದೃಷ್ಟಿಯಿಂದ ಪಾರ್ವತಿ ಹಣ ಸಂಪಾದಿಸಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಆರಂಭದಲ್ಲಿ ಕೇರಳದ ತಲಚೇರಿಯಲ್ಲಿ ಮನೆಗೆಲಸಕ್ಕೆ ಸೇರಿದ್ದರು. ಅಲ್ಲಿ ಒಂದೆರಡು ವರ್ಷ ಕೆಲಸ ಮಾಡಿದ್ದ ಪಾರ್ವತಿ ಅವರಿಗೆ ಕಾವೇರಿ ಎಂಬ ಮಹಿಳೆಯ ಪರಿಚಯವಾಗಿತ್ತು. ನಂತರ ಆ ಮಹಿಳೆಯ ಮೂಲಕವೇ ಪಾರ್ವತಿಗೆ ಊಟಿಯ ಹನೀಫ್ ಎಂಬಾತ ಪರಿಚಯವಾಗಿದ್ದ. ಆತ ಕುವೈತ್‍ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ. ಹನೀಫ್‍ನ ಮಾತನ್ನು ನಂಬಿದ್ದ ಮಹಿಳೆ ಪಾರ್ವತಿ ಕುವೈತ್‍ಗೆ ನಾಲ್ಕು ತಿಂಗಳ ಹಿಂದೆ ಹೋಗಿದ್ದರು.

ವಿಸಿಟರ್ಸ್ ವೀಸಾದ ಆಧಾರದಲ್ಲಿ ಕೊಚ್ಚಿ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹಾರಿದ್ದರು. ಕೊಚ್ಚಿಯಿಂದ ನೇರ ಮಸ್ಕತ್ ಬಳಿಕ ಅಲ್ಲಿಂದ ಕುವೈತ್‍ಗೆ ಹೋಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿಂದ ಯಾವುದೇ ಸಮಸ್ಯೆ ಇಲ್ಲದೆ ಪಾರ್ವತಿ ಅವರು ಮನೆಯೊಂದರಲ್ಲಿ ಕೆಲಸ ಮಾಡಿದ್ದರು. ಅಷ್ಟರಲ್ಲೇ ಮೂರು ತಿಂಗಳು ಪೂರೈಸಿದ್ದು, ವಿಸಿಟರ್ಸ್ ವೀಸಾದ ಅವಧಿಯೂ ಮುಗಿದಿತ್ತು. ವಿಪರ್ಯಾಸವೆಂದರೆ ಮೂರು ತಿಂಗಳ ಬಳಿಕ ಕುವೈತ್‍ನಲ್ಲಿ ಶ್ರೀಲಂಕಾದ ಏಜೆನ್ಸಿಯೊಂದರ ವ್ಯಕ್ತಿಯೊಬ್ಬ ಪಾರ್ವತಿಯನ್ನು ಬೇರೊಂದು ಮನೆಗೆ ಕೆಲಸಕ್ಕೆ ಸೇರಿಸುವುದಾಗಿ ಹೇಳಿ ಒಂದು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಅಲ್ಲಿಂದ ಪಾರ್ವತಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ವಿಸಿಟರ್ಸ್ ವೀಸಾ ಅವಧಿ ಮುಗಿದಿರುವುದರಿಂದ ಪಾರ್ವತಿ ಮನೆ ಬಿಟ್ಟು ಎಲ್ಲೂ ಹೊರಗಡೆಯೂ ಓಡಾಡುವಂತಿಲ್ಲ. ಇತ್ತ ಕೆಲಸವೂ ಇಲ್ಲ. ಸರಿಯಾದ ಊಟ, ತಿಂಡಿಯನ್ನೂ ಕೊಡುತ್ತಿಲ್ಲ. ನನ್ನನ್ನು ನಮ್ಮ ದೇಶಕ್ಕೆ ಕಳುಹಿಸಿಕೊಡಿ ಎಂದು ಕೇಳಿದರೆ ಶ್ರೀಲಂಕಾದ ಏಜೆನ್ಸಿಯ ವ್ಯಕ್ತಿ ಮೂರು ಲಕ್ಷ ಕೊಡು, ಇಲ್ಲವೇ ಆರು ತಿಂಗಳಾದರೂ ಕೆಲಸ ಮಾಡು ಎಂದು ಹಿಂಸೆ ಕೊಡುತ್ತಿರುವುದಾಗಿ ಪಾರ್ವತಿ ತನ್ನ ಮನೆಯವರಿಗೆ ವಾಟ್ಸಾಪ್ ಕರೆ ಮಾಡಿ ತಿಳಿಸಿದ್ದಾರೆ.

ಸದ್ಯ ಮಾಹಿತಿ ತಿಳಿದ ಅಧಿಕಾರಿಗಳು ಇಂಡಿಯನ್ ಎಂಬೆಸ್ಸಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಜೊತೆಗೆ ಮಹಿಳೆಗೆ ಕರೆ ಮಾಡಿ ಮಾತನಾಡಲಾಗಿದ್ದು, ಅವರು ಇರುವ ಲೊಕೇಶನ್ ಗುರುತ್ತಿಸಿದ್ದಾರೆ ಎನ್ನಲಾಗಿದೆ. ಆದಷ್ಟು ಬೇಗ ಮಹಿಳೆ ಪಾರ್ವತಿ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.