ಹರೀಶ್ ಪೂಂಜಾರಿಗೆ ಅಧಿಕಾರದ ಅಮಲು ನೆತ್ತಿಗೇರಿ,ರೌಡಿಗಳಂತೆ ವರ್ತಿಸುತ್ತಾರೆ

ಕರಾವಳಿ

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಅವರಿಗೆ ಸಾರ್ವಜನಿಕರ ಎದುರು ಕಪಾಳ ಮೋಕ್ಷ ಮಾಡುವ ಬೆದರಿಕೆ ಒಡ್ಡಿ , ಅವಮಾನ ಮಾಡಿದ ಘಟನೆ ಶಾಸಕರ ಬೀದಿ ರೌಡಿಸಂ ಗೆ ಸಾಕ್ಷಿ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಸವಣಾಲು ಗ್ರಾಮದ ಮಲೆಕುಡಿಯ ಸಮುದಾಯ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಬೈರವ , ಮೂಜಿಲ್ನಾಯ , ಪುರುಷರಾಯ ದೈವಗಳ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಯಾನಂದ ಪಿಲಿಕಲ ಅವರು ದೈವಸ್ಥಾನಕ್ಕೆ ಸರ್ಕಾರದ ಅನುದಾನ ಹಾಗೂ 3 ವರ್ಷಗಳ ಹಿಂದೆ ಶಾಸಕರು ವೈಯಕ್ತಿಕ ಅನುದಾನ ನೀಡುತ್ತೇನೆ ಎಂದು ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಮಾತನಾಡುವ ಬಗ್ಗೆ ಶಾಸಕರ ಆಹ್ವಾನದ ಮೇರೆಗೆ ತೆರಳಿದಾಗ ಯಾವುದೋ ಕ್ಷುಲ್ಲಕ ವಿಚಾರವನ್ನು ಕದಕಿ , ಕಪಾಳ ಮೋಕ್ಷ ಮಾಡುತ್ತೇನೆ ಎಂದು ಸಾರ್ವಜನಿಕರ ಎದುರಿನಲ್ಲಿ ಬೆದರಿಕೆ ಹಾಕಿ , ಅವಮಾನ ಮಾಡಿರುವುದು ಇಡೀ ಮಲೆಕುಡಿಯ ಸಮುದಾಯದ ಮೇಲೆ ನಡೆದ ಧಾಳಿಯಾಗಿದೆ.

ಶತಮಾನಗಳಿಂದ ಶೋಷಣೆಗೊಳಗಾಗಿರುವ , ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವ ಮಲೆಕುಡಿಯ ಸಮುದಾಯದ ಭರವಸೆಯ ಯುವ ನಾಯಕ ಜಯಾನಂದ ಪಿಲಿಕಲ ಜೊತೆಗಿನ ಶಾಸಕನ ನಡವಳಿಕೆ ಅಮಾನವೀಯವಾದುದು. ಇದು ದುರಾಹಂಕಾರದ ಅಂತಿಮ ಕ್ಷಣ. ದೀಪ ಆರುವ ಮೊದಲು ಪ್ರಜ್ವಲಿಸುವಂತೆ ತನ್ನ ನಾಲ್ಕೂವರೆ ವರ್ಷಗಳ ಅಧಿಕಾರದ ಮದ ನೆತ್ತಿಗೇರಿದೆ. ಇನ್ನುಳಿದ ಮೂರು ತಿಂಗಳು ದುರಾಂಹಕಾರ ಮಿತಿ ಮೀರಲಿ , ಮೂರು ತಿಂಗಳ ನಂತರ ನಿಮ್ಮ ಅಹಂಕಾರವನ್ನು ಮಟ್ಟಹಾಕಲು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ವಸಂತ ನಡ , ಪೋಲಿಸ್ ಇಲಾಖೆ ತಕ್ಷಣ ಪ್ರಕರಣ ದಾಖಲಿಸಿ , ಆರೋಪಿ ಹರೀಶ್ ಪೂಂಜಾನನ್ನು ಜೈಲಿಗಟ್ಟಬೇಕು , ಇಲ್ಲದಿದ್ದರೆ ಮಲೆಕುಡಿಯ ಸಂಘ , ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಬೆಳ್ತಂಗಡಿ ಪೋಲಿಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.