ಕುತೂಹಲ ಕೆರಳಿಸಿದ ಮಂಗಳೂರು ಉತ್ತರ ಕಾಂಗ್ರೆಸ್ ಟಿಕೆಟ್ ಫೈಟ್.!

ಕರಾವಳಿ

ಬಿಜೆಪಿ ವಿರುದ್ಧ ತೊಡೆ ತಟ್ಟಿದ ಕಾಂಗ್ರೆಸ್

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ ಪಕ್ಷ ಅಭ್ಯರ್ಥಿಗೆ ಬಿ.ಫಾರಂ ನೀಡುವವರೆಗೂ ಈ ಕ್ಷೇತ್ರದಲ್ಲಿ ಇವರೇ ಖಚಿತ ಕಾಂಗ್ರೆಸ್ ಅಭ್ಯರ್ಥಿ ಹೇಳಲು ಅಸಾಧ್ಯ ಅನ್ನುವ ಮಟ್ಟಿಗಿನ ರಾಜಕೀಯ ಚದುರಂಗದಾಟ ಮಂಗಳೂರು ಉತ್ತರದಲ್ಲಿ ನಡೆಯುತ್ತಿರುವುದು ಸುಳ್ಳಲ್ಲ.

ಕಳೆದ ಆರು ತಿಂಗಳಿನಿಂದ ಈ ಕ್ಷೇತ್ರದಲ್ಲಿ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿ ಇನಾಯತ್ ಅಲಿ ರವರ ಹೆಸರು ಕೇಳಿ ಬರುತ್ತಿತ್ತು. ಆದರೆ ಇದೀಗ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ರವರು ಕೂಡ ಅಷ್ಟು ಸುಲಭದಲ್ಲಿ ಟಿಕೆಟ್ ಬಿಟ್ಟು ಕೊಡಲು ತಯಾರಿಲ್ಲ ಅನ್ನುವ ಸಂದೇಶವನ್ನು ವರಿಷ್ಠರಿಗೆ ನೀಡಿದ್ದಾರೆ.

ಈವರೆಗೂ ಕಾಂಗ್ರೆಸ್ ನಾಯಕರ ಮಧ್ಯೆಯೇ ಪರೋಕ್ಷವಾಗಿ ಹಗ್ಗಜಗ್ಗಾಟ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ವಿರುದ್ಧ ಮಂಗಳೂರು ಉತ್ತರದಲ್ಲಿ ಕದನಕ್ಕೆ ಕಾಂಗ್ರೆಸ್ ಪಕ್ಷ ಇಳಿದಿದೆ. ಮೊಹಿದ್ದೀನ್ ಬಾವಾ ನೇತೃತ್ವದಲ್ಲಿ ‘ಬಿಜೆಪಿ ಸುಳ್ಳುಗಳ ವಿರುದ್ಧ ಸಮರ’ ಧ್ಯೇಯ ವಾಕ್ಯದೊಂದಿಗೆ ಬೃಹತ್ ಪ್ರತಿಭಟನಾ ಸಭೆ, ಬೈಕ್ ರ್ಯಾಲಿ ನಡೆದಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ಮಂಗಳೂರು ಉತ್ತರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ತೊಡೆ ತಟ್ಟಿ ನಿಂತಿದೆ. ಸುರತ್ಕಲ್ ಮಾರುಕಟ್ಟೆ ಅಪೂರ್ಣ, ಬಿಜೆಪಿ 40% ಕಮೀಷನ್, ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಖರ್ಗೆ, ನಿಕೇತ್ ರಾಜ್ ಮೌರ್ಯ, ಭವ್ಯ ಸರಣಿ ಪ್ರಶ್ನೆಗಳ ಮೂಲಕ ಬಿಜೆಪಿಯ ಸುಳ್ಳುಗಳನ್ನು ಅನಾವರಣಗೊಳಿಸಿದರು.

ಇದು ಬಿಜೆಪಿ ವಿರುದ್ಧದ ಪ್ರತಿಭಟನೆಯಾದರೂ, ಮತ್ತೊಂದೆಡೆ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ರವರ ಶಕ್ತಿ ಪ್ರದರ್ಶನ ವಾಗಿ ಕಂಡುಬಂದಿದ್ದು ಕೂಡ ಸುಳ್ಳಲ್ಲ. ಮೃತ ಜಲೀಲ್ ಸೇರಿದಂತೆ ನಾಲ್ವರು ಕುಟುಂಬಕ್ಕೆ ಪ್ರಿಯಾಂಕಾ ಖರ್ಗೆ ನೇತೃತ್ವದಲ್ಲಿ ಪರಿಹಾರ ಧನ ವಿತರಿಸಲಾಗಿದೆ. ಪ್ರತಿಭಟನಾ ಸಮಾವೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು ಮೊಹಿದ್ದೀನ್ ಬಾವಾ ಹವಾ ಉತ್ತರದಲ್ಲಿ ಇನ್ನೂ ಇದೆ ಅನ್ನುವುದಕ್ಕೆ ಸಾಕ್ಷಿ ಅನ್ನುವುದು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಹೈಕಮಾಂಡ್ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಅನ್ನುವ ಮಾಹಿತಿಗಳು ಕೇಳಿ ಬರುತ್ತಿದ್ದರೂ, ಇತ್ತ ಮೊಹಿದ್ದೀನ್ ಬಾವಾ ಉತ್ತರದಲ್ಲಿ ತನ್ನದೇ ಇಮೇಜ್ ಇರುವುದಾಗಿ ಈ ಪ್ರತಿಭಟನಾ ಸಮಾವೇಶದ ಮೂಲಕ ಹೈಕಮಾಂಡ್ ಗೆ ಸಂದೇಶ ನೀಡುವಲ್ಲಿ ಸಫಲರಾಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಗುರುಪುರ, ಸುರತ್ಕಲ್ ಬ್ಲಾಕ್ ಮೊಹಿದ್ದೀನ್ ಬಾವಾ ಪರವಿರುವುದು ಟಿಕೆಟ್ ಆಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಎರಡು ಬ್ಲಾಕಿನ ನಾಯಕರು ರಾಜ್ಯ ನಾಯಕರ ಮುಂದೆ ಪೆರೇಡ್ ನಡೆಸಿದ್ದು, ನಾವೆಲ್ಲ ಬಾವಾ ಪರ ಇನ್ನೂ ಗಟ್ಟಿಯಾಗಿ ನಿಂತಿದ್ದೇವೆ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಒಟ್ಟಾರೆ ಮಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ ಫೈಟ್ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಕೊನೆ ಕ್ಷಣದವರೆಗೂ ಕುತೂಹಲ ಏರ್ಪಟ್ಟಿರುವುದು ಸುಳ್ಳಲ್ಲ. ಮುಂದಿನ ದಿನಗಳಲ್ಲಿ ಯಾರು ಹೆಚ್ಚು ಸಕ್ರೀಯವಾಗಿ ಕದನದಲ್ಲಿ ಇರುತ್ತಾರೋ ಅವರ ಪಾಲಿಗೆ ಟಿಕೆಟ್ ಒಲಿಯುವುದಂತೂ ಖಂಡಿತ. ಈಗಲೇ ತೀರ್ಮಾನ ಮಾಡುವುದು ಕಷ್ಟ ಅನ್ನುವುದು ರಾಜಕೀಯ ಬಲ್ಲವರ ಅಭಿಪ್ರಾಯ.