ಬಹು ಲೈಂಗಿಕ ಸಂಗಾತಿಗಳು: ಹಿಂದೂಗಳಲ್ಲೇ ಅತ್ಯಧಿಕ

ರಾಷ್ಟ್ರೀಯ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಬಹಿರಂಗ

ಭಾರತದಲ್ಲಿ ಬಹು ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಎಲ್ಲಾ ಧರ್ಮಗಳ ಪುರುಷರ ಪೈಕಿ ಹಿಂದೂಗಳು ಮೊದಲ ಸ್ಥಾನದಲ್ಲಿದ್ದಾರೆ. ಸಿಖ್ಖರು, ಕ್ರೈಸ್ತರು, ಬೌದ್ಧರು, ಮುಸ್ಲಿಮರು ಹಾಗೂ ಜೈನರು ಕ್ರಮವಾಗಿ ಆನಂತರದ ಸ್ಥಾನದಲ್ಲಿದ್ದಾರೆ.

ವಿವಾಹೇತರ ಸಂಗಾತಿಗಳನ್ನು ಹೊಂದಿರುವ ಅಥವಾ ಲಿವ್ ಇನ್ ಸಂಗಾತಿಗಳನ್ನು ಹೊಂದಿರುವ ಹಿಂದೂ ಪುರುಷರ ಸರಾಸರಿ ಸಂಖ್ಯೆ 2.2 ಆಗಿದೆ. ಬಹು ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಸಿಖ್ಖರು ಹಾಗೂ ಕ್ರೈಸ್ತರ ಸರಾಸರಿ ಸಂಖ್ಯೆ 1.9 ಆಗಿದೆ ಹಾಗೂ ಮುಸ್ಲಿಮರ ಸರಾಸರಿ ಸಂಖ್ಯೆ 1.7 ಆಗಿದೆ. ಜೈನರಲ್ಲಿ ಲೈಂಗಿಕ ಸಂಗಾತಿಗಳನ್ನು ಹೊಂದಿರುವವರ ಸರಾಸರಿ ಸಂಖ್ಯೆ ಅತ್ಯಂತ ಕನಿಷ್ಠ ಅಂದರೆ 1.1 ಆಗಿದೆ.

ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವಂತಹ ಬಹು ಲೈಂಗಿಕ ಸಂಗಾತಿಗಳನ್ನು ಹೊಂದಿರುವವರು ಎಚ್ ಐ ವಿ ನಂತಹ ಸೋಂಕು ರೋಗಗಳಿಗೆ ತುತ್ತಾಗುವ ಅಥವಾ ಲೈಂಗಿಕ ಸಂಪರ್ಕದ ಮೂಲಕ ಹರಡುವ ಕಾಯಿಲೆಯಿಂದ ಪೀಡಿತರಾಗುವ ಸಾಧ್ಯತೆ ಅಧಿಕವಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ವರದಿ ತಿಳಿಸಿದೆ.

ದೇಶಾದ್ಯಂತ 29 ರಾಜ್ಯಗಳ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳ 8.25 ಲಕ್ಷ ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿಂದೆ 2015-16 ರ ಅವಧಿಯಲ್ಲಿ ನಡೆಸಿದ ಎನ್ ಎಫ್ ಎಚ್ ಎಸ್ -5 ರ ಸಮೀಕ್ಷೆಯು ಬಹು ಲೈಂಗಿಕ ಸಂಗಾತಿಗಳನ್ನು ಹೊಂದಿರುವವರ ಸಂಖ್ಯೆ ಕ್ರೈಸ್ತ ಸಮುದಾಯದಲ್ಲಿ ಅಧಿಕ ( ಸರಾಸರಿ 2.4) ಎಂದು ತಿಳಿಸಿತ್ತು. ಬೌದ್ಧರು ಹಾಗೂ ಮುಸ್ಲಿಮರು ( 2.1) ಹಾಗೂ ಹಿಂದೂಗಳು (1.9 ) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿದ್ದರು.

ಬಹು ಲೈಂಗಿಕ ಪಾಲುದಾರರನ್ನು ಹೊಂದುವ ಪ್ರವೃತ್ತಿಯು ಪುರುಷರಲ್ಲಿ 4 ನೇ ಎನ್ ಎಫ್ ಎಚ್ ಎಸ್ ಸಮೀಕ್ಷೆಯಲ್ಲಿ 1.9 ಇದ್ದರೆ ಎನ್ ಎಫ್ ಎಚ್ ಎಸ್-5 ರ ಅವಧಿಯಲ್ಲಿ ಅದು 2.1 ಕ್ಕೇರಿದೆ.

ತಮ್ಮ ಪತ್ನಿ ಅಥವಾ ಸಂಗಾತಿ ಅಲ್ಲದೆ ಬೇರೆ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವಿರಾ ಎಂಬ ಪ್ರಶ್ನೆಗೆ ಬೌದ್ಧರಲ್ಲಿ ಶೇ 7 ರಷ್ಟು ಮಂದಿ ಹೌದು ಎಂಬುದಾಗಿ ಉತ್ತರಿಸಿದ್ದಾರೆ. ಸಿಖ್ಖರು (6.0 ಶೇ.), ಹಿಂದೂಗಳು (4.0 ಶೇ.), ಕ್ರೈಸ್ತರು (3.8 ಶೇ.) ಹಾಗೂ ಮುಸ್ಲಿಮರು (2.8 ಶೇ.) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿದ್ದಾರೆ.

ಒಂದಕ್ಕಿಂತ ಅಧಿಕ ಪತ್ನಿಯರನ್ನು ಹೊಂದಿರುವ ಸಂಖ್ಯೆ ಮುಸ್ಲಿಮರ ಸಂಖ್ಯೆ (1.9 ಶೇ.) ಆಗಿದೆ. ಆದರೆ ಬಹು ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಪುರುಷರ ಸಂಖ್ಯೆ ಹಿಂದೂಗಳಲ್ಲಿ ಅಧಿಕವಾಗಿದೆ. ಹಿಂದೂಗಳಲ್ಲಿ ಸರಾಸರಿ 1.3 ಶೇ. ಮಂದಿ ಬಹುಪತ್ನಿತ್ವ ಅನುಸರಿಸುತ್ತಿದ್ದಾರೆ.