ನಾಲ್ಕು ದಶಕಗಳಿಂದ ರಸ್ತೆ,ವಿದ್ಯುತ್ ದೀಪ,ಮೂಲಭೂತ ಸೌಕರ್ಯ ಕಾಣದೆ, ವನವಾಸದಲ್ಲಿರುವ ದಲಿತ ಕುಟುಂಬಗಳ ಅರಣ್ಯರೋಧನೆ

ರಾಜ್ಯ

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದ ವ್ಯಾಪ್ತಿಯ ಮೋತಿಕಲ್ ತಾಂಡದ ಹತ್ತಿರದಲ್ಲಿರುವ ದಲಿತ ಸಮುದಾಯದ ರೈತರು ತಮ್ಮ ತಮ್ಮ ಹೊಲದಲ್ಲಿ, ಕಳೆದ 40 ವರ್ಷಗಳಿಂದ ವಾಸವಿದ್ದಾರೆ. ಈ ಕುಟುಂಬಗಳು ಇಂದಿಗೂ ಮೂಲಭೂತ ಸೌಕರ್ಯಗಳನ್ನು ಕಾಣದೆ ವಂಚಿತರಾಗಿದ್ದಾರೆ.

ಇಲ್ಲಿ ವಾಸವಿರುವ ಕುಟುಂಬ ಇಪ್ಪತ್ತೈದು ಮಿಕ್ಕ ದಲಿತ ವಿದ್ಯಾರ್ಥಿಗಳು ನಾಲ್ಕು ದಶಕಗಳಿಂದಲೂ ಏಣ್ಣೆ ದೀಪದಡಿ ವಿದ್ಯಾಭಾಸ ಮಾಡುತ್ತಿದ್ದಾರೆ.ದೀಪದ ಅಡಿಯಲ್ಲಿ ಓದಿ ಓರ್ವ ಈಗಾಗಲೇ ಪದವೀದರನಾಗಿದ್ದಾನೆ, ಇನ್ನುಳಿದವರಲ್ಲಿ ಬಹುತೇಕ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಾಲೇಜು ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ಬಡ ದಲಿತ ಕುಟುಂಬಗಳು ಅಕ್ಷರಸಃ ಕಳೆದ ನಾಲ್ಕು ದಶಕಗಳಿಂದ ಕಾರ್ಗತ್ತಲ ಹೊಲದಲ್ಲಿಯೇ ವಾಸ ಮಾಡುತ್ತಿದ್ದಾರೆ.ನಾಲ್ಕು ದಶಕಗಳಿಂದಲೂ ಮೂಲಭೂತ ಸೌಲಭ್ಯಗಳಿಗಾಗಿ ನಿರಂತರವಾಗಿ, ಸಂಬಂಧ ಪಟ್ಟಆಡಳಿತ ಕಚೇರಿಗಳಿಗೆ ಅಲೆದಾಡಿದ್ದಾರೆ. ಆದರೆ ಅವರಿಗೆ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ, ಆಸರೆ ಮಾತ್ರ ಗಗನ ಕುಸುಮವಾಗಿದೆ. ಇದರ ಪರಿಣಾಮ ದಲಿತ ಕುಟುಂಬಗಳು ಕಾಡ್ಗತ್ತಲ್ಲಲ್ಲಿ ವನವಾಸಾದಲ್ಲಿವೆ.

ನಾವು ನಲವತ್ತು ವರ್ಷಗಳಿಂದಲೂ ಈ ಪ್ರದೇಶದಲ್ಲಿ ವಾಸವಿದ್ದು, ಸರ್ಕಾರಿ ಸೌಲಭ್ಯ ಹೊಂದಲು ಅಗತ್ಯವಿರೋ ಎಲ್ಲಾ ಅರ್ಹತೆ ಹೊಂದಿದ್ದರೂ, ದಾಖಲೆಗಳಿದ್ದರೂ ಸ್ಥಳೀಯ ಆಡಳಿತ ಮಾತ್ರ ನಮ್ಮನ್ನು ಕಡೆಗಣಿಸಿದೆ ಅನ್ನುತ್ತಾರೆ ಇಲ್ಲಿನ ನಾಗರಿಕರು.ಸಾಕಷ್ಟು ಬಾರಿ ವಿದ್ಯುತ್ ಸೌಕರ್ಯಕ್ಕಾಗಿ ಜೆಸ್ಕಾಂ ಇಲಾಖೆಯ ಮೊರೆ ಹೋಗಿದ್ದು, ಅವರು ಸ್ಥಳಪರಿಶೀಲಸಿ ಸೌಕರ್ಯ ಕಲ್ಪಿಸುವುದಾಗಿ ಹಲವು ವರ್ಷಗಳಿಂದ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈ ವರೆಗೂ ಕಾರ್ಯರೂಪ ಕಂಡಿಲ್ಲ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಬೇಸರ ವ್ಯಕ್ತಪಡಸಿದ್ದಾರೆ ಇಲ್ಲಿನ ನಿವಾಸಿಗಳು .ಪ್ರಭಾವಿ ಜನಪ್ರತಿಧಿಗಳೆಂದು, ತಮ್ಮನ್ನ ತಾವು ಬಿಂಬಿಸಿಕೊಂಡಿರುವವರು ಬಂದು ಪರಿಶೀಲಿಸಿದ್ದಾರೆ ಜೊತೆಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಜೊತೆ ಜೊತೆಗೆ ತಮ್ಮ ರೂಡಿ ಸಂಪ್ರದಾಯದಂತೆ ಭರಪೂರ ಭರವಸೆಗಳನ್ನು ನೀಡಿದ್ದಾರೆ. ವಿನಃ, ಒಬ್ಬನೇ ಒಬ್ಭ ಜನಪ್ರತಿನಿಧಿ ಪ್ರಾಮಾಣಿಕತೆಯ ಕಾಳಜಿ ತೋರಿಲ್ಲ ಎಂದು ತಮ್ಮ ಅಳನ್ನು ತೋಡಿಕೊಂಡಿದ್ದಾರೆ ದಲಿತ ಕುಟುಂಬಗಳ ಸದಸ್ಯರು.

ತಮ್ಮ ಭವಿಷ್ಯದ ಬಗ್ಗೆ ಚಿಂತೆ ಇಲ್ಲ ದೇವರಿದ್ದಾನೆ, ಕಾಯುತ್ತಾನೆ, ಆದ್ರೆ ನಮ್ಮನ್ನು ನಂಬಿರುವ ಮಕ್ಕಳ ಭವಿಷ್ಯಕ್ಕಾಗಿ ತಾವು ವಿದ್ಯುತ್ ಹಾಗೂ ರಸ್ತೆ ಸೌಕರ್ಯಕ್ಕಾಗಿ ಹೋರಾಟ ನಡೆಸುವುದಾಗಿ ದಲಿತ ಕುಟುಂಬಗಳು ತಿಳಿಸಿವೆ. ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಹಾಗೂ ರಸ್ತೆ ನಿರ್ಮ‍ಾಣ ಮಾಡಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ತಾಲೂಕಾಡಳಿತದ ಮುಂದೆ ಅನಿರ್ಧಿಷ್ಠಾವಧಿ ಕಾಲ ಧರಣಿ ಮಾಡುವುದೇ ಉಳಿದಿರುವ ಏಕೈಕ ದಾರಿ.ಮೂಲ ಸೌಕರ್ಯಕ್ಕಾಗಿ ಕ‍ಾನೂನು ರೀತಿಯ ಹೋರಾಟ ನಮಗೆ ಅನಿವಾರ್ಯ ಎನ್ನುತ್ತಾರೆ ಇಲ್ಲಿನ ದಲಿತರು.ಕತ್ತಲ್ಲಲ್ಲಿರುವ ತಮ್ಮ ಕುಟುಂಬಗಳಲ್ಲಿರುವ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ, ಕತ್ತಲಾಗುವ ಭೀತಿ ಬೆಂಬಿಡದೇ ಕಾಡುತ್ತಿದೆ.ಶೀಘ್ರವೇ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದ‍ಾಗ ಬೇಕಾಗಿದೆ.

ಈ ದಲಿತರ ಕುಟುಂಬದ ಅರಣ್ಯರೋಧನೆ ಕೇಳುವವರಿಲ್ಲದಂತಾಗಿದೆ. ಯಾವುದೇ ಜನಪ್ರತಿನಿಧಿಗಳು ಇವರ ಅಹವಾಲನ್ನು ಆಲಿಸುತ್ತಿಲ್ಲ. ಯಾವ ಅಧಿಕಾರಿಯೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸ್ಪಂಧಿಸಿಲ್ಲ ಎಂದು ಇಲ್ಲಿನ ದಲಿತ ಕುಟುಂಬ ತಮ್ಮ ಅಳಲನ್ನು ವ್ಯಕ್ತ ಪಡಿಸಿದೆ.ನಮ್ಮ ಮಕ್ಕಳು ವಿದ್ಯುತ್ ಬೆಳಕಿಲ್ಲದೆ ನಿತ್ಯವೂ ಕತ್ತಲಲ್ಲಿದ್ದು, ಎಣ್ಣೆ ದೀಪದ ಅಡಿಯಲ್ಲಿ ವ್ಯಾಸಾಂಗ ಮಾಡೋ ಮೂಲಕ ಏನೂ ಕಾಣದ ಕಾಡಗತ್ತಲಲ್ಲಿ ತಮ್ಮ ಭವಿಷ್ಯ ಕಂಡು ಕೊಳ್ಳುವ ಹರಸಾಹಸ ನಿತ್ಯ ಮಾಡುತ್ತಿದ್ದಾರೆ ವಿದ್ಯಾರ್ಥಿಗಳು. ಇಲ್ಲಿನ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ಸಮಸ್ಯೆಯಾದರೆ ಆಸ್ಪತ್ರೆಗೆ ದಾಖಲಿಸಲು ತುಂಬಾ ಕಷ್ಟಪಡಬೇಕಾದ ಸನ್ನಿವೇಶ,ಹೊಲದಲ್ಲಿನ ವನವಾಸದಿಂದಾಗಿ ಕಾಡ್ಗತ್ತಲಲ್ಲಿ ಬರುವ ವಿಷಜಂತುಗಳೊಂದಿಗೆ ನಿತ್ಯ ಸೆಣಸಾಟ, ವನ್ಯ ಮೃಗಗಳೊಂದಿಗೆ ನಿತ್ಯವೂ ಹೋರಾಟ ತಪ್ಪಿದ್ದಲ್ಲ.ಇಲ್ಲಿನ ದಲಿತ ಕುಟುಂಬಗಳಿಗೆ ಬೆಂಕಿಯ ಬೆಳಕೇ ಜೀವನದುತ್ಸಾಹ ತುಂಬಿದೆ, ನಿತ್ಯ ಚೇತನ ನೀಡುತ್ತಿದೆ. ವಿದ್ಯಾರ್ಥಿಗಳ ಪಾಲಿಗೆ ಎಣ್ಣೆ ದೀಪವೇ ಜೀವನ ದಾರಿದೀಪವಾಗಿದೆ.
ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ.